ತನಿಖೆಗೆ ಸಹಕರಸಿ : ರಮೇಶ್‌ ಜಾರಕೀಹೋಳಿಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು:

     ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ಗೆ 439 ಕೋಟಿ ರೂಪಾಯಿ ಸಾಲ ಮರುಪಾವತಿಸದೆ ವಂಚಿಸಿರುವ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಸಿಐಡಿ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

     ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಪಡೆದ ಸಾಲ ಮರುಪಾವತಿಸದ ಪ್ರಕರಣ ಸಂಬಂಧ ಸಿಐಡಿ ವಿಚಾರಣೆಗೆ ಸಹಕರಿಸುವಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೂಚಿಸಿರುವ ಹೈಕೋರ್ಟ್‌, ಬಂಧನದಂತಹ ಕ್ರಮಕ್ಕೆ ಮುಂದಾಗುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಶುಕ್ರವಾರ ಆದೇಶಿಸಿದೆ.    

    ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಅರ್ಜಿದಾರರ ಕೋರಿಕೆಯ ಮೇರೆಗೆ ಸಿಐಡಿಯನ್ನು ಪ್ರಕರಣದಲ್ಲಿ ಮೂರನೇ ಪ್ರತಿವಾದಿಯಾಗಿ ಸೇರ್ಪಡೆ ಮಾಡಲು ಅನುಮತಿಸಲಾಗಿದೆ. ಅಲ್ಲದೇ, ಪ್ರಕರಣ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿಲು ಕೋರಿರುವ ಮನವಿಯನ್ನು ಪುರಸ್ಕರಿಸಲಾಗಿದೆ. ಇದನ್ನು ಸರ್ಕಾರದ ವಕೀಲರ ಜೊತೆಗೂ ಹಂಚಿಕೊಳ್ಳಬೇಕು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ/ಆರೋಪಿಗಳನ್ನು ನ್ಯಾಯಾಲಯದ ಅನುಮತಿ ಇಲ್ಲದೇ ತನಿಖಾ ಸಂಸ್ಥೆ ಬಂಧಿಸಬಾರದು. ಅರ್ಜಿದಾರ/ಆರೋಪಿಗಳು ತನಿಖೆಗೆ ಸಹಕರಿಸಬೇಕು” ಎಂದು ಪೀಠವು ನಿರ್ದೇಶಿಸಿದೆ.

    ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅರ್ಜಿದಾರರಿಗೆ ಸಿಐಡಿ ನೋಟಿಸ್‌ ಜಾರಿಗೊಳಿಸಿದೆ. ಆದರೆ, ಅರ್ಜಿದಾರರು ವಿಚಾರಣೆಗೆ ಹಾಜರಾಗುತ್ತಿಲ್ಲ. ಇದರಿಂದ ಪ್ರಕರಣದ ತನಿಖೆಗೆ ಮುಂದುವರಿಯದಂತಾಗಿದೆ ಎಂದು ಪೀಠದ ಗಮನಕ್ಕೆ ತಂದರು.

    ಬೆಳಗಾವಿಯ ಗೋಕಾಕದಲ್ಲಿರುವ ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್‌ನಲ್ಲಿ ಯಂತ್ರೋಪಕರಣ ಅಳವಡಿಕೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ 2011ರಿಂದ 2017ರ ಅವಧಿಯಲ್ಲಿ 232.88 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. ಸಕಾಲಕ್ಕೆ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಅಸಲು ಹಾಗೂ ಬಡ್ಡಿ ಸೇರಿ 439.7 ಕೋಟಿ ರೂಪಾಯಿ ಆಗಿದೆ. ಸಾಲ ಪಡೆಯುವ ವೇಳೆ ಸಕ್ಕರೆ ಕಾರ್ಖಾನೆಗೆ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 

     ಆದರೆ, ಸಾಲ ಬಾಕಿಯಿರುವ ಅವಧಿಯಲ್ಲೇ ರಮೇಶ್‌ ಜಾರಕಿಹೊಳಿ ನಿರ್ದೇಶಕರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಹುದ್ದೆಗಳಿಗೆ ಬೇರೆಯವರು ನೇಮಕಗೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಹಾಗೂ ಸಾಲ ಮರು ಪಾವತಿಸದೆ ವಂಚಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ಬೆಂಗಳೂರಿನ ವಿ.ವಿ ಪುರಂ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ ಗೃಹ ಇಲಾಖೆ ಆದೇಶಿಸಿತ್ತು.

    ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್‌ ಹಾಗೂ ಸಿಐಡಿ ತನಿಖೆ ರದ್ದು ಕೋರಿ ರಮೇಶ್‌ ಜಾರಕಿ ಹೊಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ 2024ರ ಫೆಬ್ರವರಿ 9ರಂದು ವಿಚಾರಣೆಗೆ ಬಂದಿದ್ದಾಗ ಸಿಐಡಿಯ ಡಿವೈಎಸ್‌ಪಿ ಹಾಜರಾಗಿ, ರಮೇಶ್‌ ಜಾರಕಿಹೊಳಿ ಪುತ್ರನ ಮದುವೆ ಫೆಬ್ರವರಿ 27ರಂದು ನಡೆಯಲಿದೆ. ಅಲ್ಲಿಯವರೆಗೆ ಅವರ ವಿರುದ್ಧದ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.

Recent Articles

spot_img

Related Stories

Share via
Copy link
Powered by Social Snap