ಡಿಕೆಶಿ 50 ಶಾಸಕರ ಸಂಖ್ಯಾಬಲ ತೋರಿಸಿದ್ರೆ ಇವತ್ತೇ ಸಿಎಂ ಮಾಡ್ತೇವೆ: ರಮೇಶ್‌ ಜಾರಕಿಹೊಳಿ

ಬೆಳಗಾವಿ

     ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಡಿ.ಕೆ.ಶಿವಕುಮಾರ್  ಮೂಲ ಕಾರಣವೇ ಹೊರತು ಸಿದ್ದರಾಮಯ್ಯ ಅಲ್ಲ. ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡಿದ್ದಕ್ಕೆ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರ ಕೆಡವಿದೆ. ಆದರೆ, ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದರೆ ನಾವು ಒಪ್ಪುವುದಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ   ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ   ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

     ದೇವೇಗೌಡ ಅವರ ಮಾತಿಗೆ ಕೌಂಟರ್ ಕೊಡಲು ಆಗುವುದಿಲ್ಲ. ಆದರೆ, ಸಮ್ಮಿಶ್ರ ಸರ್ಕಾರ ಪತನಕ್ಕೆ ಮೂಲಕಾರಣ ಡಿಕೆ.ಶಿವಕುಮಾರ್. ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರವನ್ನು ಕೆಡವಿದೆ. ಆಪರೇಷನ್ ಕಮಲದ ಮೂಲ ಸೂತ್ರದಾರ ನಾನೇ ಎಂದು ತಿಳಿಸಿದ್ದಾರೆ. 

    ಡಿ.ಕೆ.ಶಿವಕುಮಾರ್ ಅವರಿಂದಲೇ ಸರ್ಕಾರ ಪತನವಾಯಿತು ಎನ್ನುವುದು ರಾಜ್ಯದ ಚಿಕ್ಕಮಕ್ಕಳಿಗೂ ಗೊತ್ತಿದೆ. ಡಿ.ಕೆ.ಶಿವಕುಮಾರ್ ಶಾಸಕರ ಸಂಖ್ಯಾಬಲದಲ್ಲಿ ದುರ್ಬಲರಿದ್ದಾರೆ. ಡಿ.ಕೆ.ಶಿವಕುಮಾರ್ 50 ಶಾಸಕರ ಸಂಖ್ಯಾಬಲ ತೋರಿಸಿದರೆ ಇವತ್ತೇ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ. ಆದರೆ. ಅವರಿಗೆ ಶಾಸಕರ ಬೆಂಬಲವಿಲ್ಲ ಎಂದಿದ್ದಾರೆ. 

   ನಾಯಕತ್ವ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಯಾರನ್ನೇ ಸಿಎಂ ಮಾಡಿಕೊಳ್ಳಲಿ, ಅದಕ್ಕೆ ನಮಗೆ ಸಂಬಂಧವಿಲ್ಲ. ನಾನು ಕಾಂಗ್ರೆಸ್‌ನಲ್ಲಿ ಇದ್ದಾಗ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಹೇಳಿದ್ದೆ. ಈಗ ನಾನು ಬಿಜೆಪಿಯಲ್ಲಿ ಇದ್ದೇನೆ. ಇವತ್ತಿನ ಸನ್ನಿವೇಶದಲ್ಲಿ ಅದನ್ನು ಕೇಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 

   ಡಿ.ಕೆ. ಶಿವಕುಮಾರ್ ಎಂದಾದರೂ ಬಿಜೆಪಿಗೆ ಬರಲು ನಿರ್ಧರಿಸಿದರೆ ನಾವು ಅವರನ್ನು ಸ್ವಾಗತಿಸುವುದಿಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ ಎಂದರು. ಇದೇ ವೇಳೆ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಂದಿನ ಎರಡೂವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮುಂದುವರಿಯುತ್ತದೆ. ಜನರು ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

    ಮುಖ್ಯಮಂತ್ರಿ ಸ್ಥಾನದ ವಿಷಯದಲ್ಲಿ ಈ ವಿಚಾರದಲ್ಲಿ ನಾವು ಏನೂ ಮಾತನಾಡಬಾರದು. ಬಿಜೆಪಿ ತಟಸ್ಥವಾಗಿ ಉಳಿಯಬೇಕು. ಕಾಂಗ್ರೆಸ್‌ನವರು ಎಷ್ಟಾದರೂ ಕಚ್ಚಾಡಲಿ. ಅವರ ಹೊಲಸು ನಮ್ಮ ಮೈಮೇಲೆ ಹಾಕಿಕೊಳ್ಳಬಾರದು. ಈ ಹಿಂದೆ ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷವೇ ಇಬ್ಭಾಗವಾಗಿ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿತು. ಅಂಥ ಪರಿಸ್ಥಿತಿ ರಾಜ್ಯದಲ್ಲಿ ಬರುವುದಿಲ್ಲ. ಇಲ್ಲಿ ಶಾಸಕರ ಸಂಖ್ಯಾಬಲದಲ್ಲಿ ಬಹಳ ವ್ಯತ್ಯಾಸವಿದೆ. ಆದರೂ ಡಿ.ಕೆ.ಶಿವಕುಮಾರ್ ತಮ್ಮ ತಂಡ ಕರೆದುಕೊಂಡು ಬಿಜೆಪಿಗೆ ಬಂದರೆ ನಾವಂತೂ ಒಪ್ಪುವುದಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.

Recent Articles

spot_img

Related Stories

Share via
Copy link