ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ : 46 ವರ್ಷದ ಮಹಿಳೆಗೆ ಶೇ.40ರಷ್ಟು ಸುಟ್ಟ ಗಾಯ

ಬೆಂಗಳೂರು:

    ಶುಕ್ರವಾರ ಮಧ್ಯಾಹ್ನ ಸಂಭವಿಸಿದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ 10 ಜನರ ಪೈಕಿ 46 ವರ್ಷದ ಮಹಿಳೆಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದು, ಕುಂದಲಹಳ್ಳಿಯ ಬ್ರೂಕ್‌ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವರ್ಣಾಂಬ ಎಂಬ ಈ ಮಹಿಳೆ ನಗರದ ಐಟಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಸ್ವರ್ಣಾಂಬಾ ಅವರ ಮುಖ, ಕೈ, ಕಾಲುಗಳು ಮತ್ತು ತೊಡೆಯ ಭಾಗಕ್ಕೆ ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

   ಆಕೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಬ್ರೂಕ್‌ಫೀಲ್ಡ್ ಆಸ್ಪತ್ರೆಯ ಜನರಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಟಿ.ಜೆ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ಅವರಲ್ಲದೇ, ಫಾರೂಖ್ ಹುಸೇನ್ (19) ಮತ್ತು ದ್ವೀಪಾಂಶು (23) ಎಂಬವರನ್ನು ಬ್ರೂಕ್‌ಫೀಲ್ಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಫಾರೂಖ್ ರಾಮೇಶ್ವರಂ ಕೆಫೆಯಲ್ಲಿ ಉದ್ಯೋಗಿಯಾಗಿದ್ದರೆ ದ್ವೀಪಾಂಶು ಐಟಿ ಉದ್ಯೋಗಿಯಾಗಿದ್ದಾರೆ. ಮೂವರಿಗೂ ಕಿವಿಗಳಿಗೆ ಗಾಯಗಳಾಗಿವೆ ಎಂದು ಡಾ.ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

   “ಎಕ್ಸರೇ ತೆಗೆಯಲಾಗಿದೆ. ಆದರೆ ಅವರ ಚರ್ಮಕ್ಕೆ ನುಗ್ಗಿದ ವಸ್ತುಗಳು ಯಾವುವು ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ದ್ವೀಪಾಂಶುವಿನ ಕಿವಿಗೂ ಗಾಯಗಳಾಗಿದ್ದು, ಅವರು ಆಡಿಯೊಮೆಟ್ರಿ ಪರೀಕ್ಷೆಗಳಿಗೆ ಒಳಗಾಗಬೇಕಾಗಿದೆ. ಎಲ್ಲಾ ರೋಗಿಗಳು ಆಘಾತದ ಸ್ಥಿತಿಯಲ್ಲಿದ್ದಾರೆ ಎಂದು ಡಾ ಕುಮಾರ್ ಹೇಳಿದರು.

    “ಗಾಯಗಳ ಪ್ರಕಾರವನ್ನು ನೋಡಿದಾಗ, ಇದು ಕಡಿಮೆ-ತೀವ್ರತೆಯ ಸ್ಫೋಟ ಎಂದು ಶಂಕಿಸಲಾಗಿದೆ. ಸ್ಫೋಟದಲ್ಲಿ ಯಾವುದೇ ದ್ರವವನ್ನು ಬಳಸಲಾಗಿಲ್ಲ. ರಾಸಾಯನಿಕಗಳ ಬಳಕೆ ಮಾಡಿರುವಂತೆ ಕಂಡುಬಂದಿದೆ. ಗಾಯಗೊಂಡವರು ಧರಿಸಿರುವ ಉಡುಪಿನ ಮಾದರಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಮತ್ತು ಎಫ್‌ಎಸ್‌ಎಲ್ ತಂಡಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

    ಇತರ ಗಾಯಾಳುಗಳಾದ ಮೋಹನ್ (41), ನಾಗಶ್ರೀ (35), ಮೌಮಿ (30), ಬಲರಾಮ ಕೃಷ್ಣ (31), ನವ್ಯಾ (25), ಮತ್ತು ಶ್ರೀನಿವಾಸ್ (67) ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಗಾಯಗೊಂಡ ಹತ್ತನೇ ವ್ಯಕ್ತಿಯ ವಿವರಗಳು ಪೊಲೀಸರಿಂದ ಇನ್ನೂ ಪತ್ತೆಯಾಗಿಲ್ಲ.

Recent Articles

spot_img

Related Stories

Share via
Copy link
Powered by Social Snap