ಪದಾರ್ಪಣ ಪಂದ್ಯದಲ್ಲೇ ದಾಖಲೆ ಬರೆದ ರಾಣಾ

ನಾಗ್ಪುರ: 

    ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಟೀಮ್‌ ಇಂಡಿಯಾದ ವೇಗಿ ಹರ್ಷಿತ್‌ ರಾಣಾ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್‌ ತಂಡ ಮೂರು ವಿಕೆಟ್‌ ಬೇಟೆಯಾಡುವ ಮೂಲಕ ಮೂರು ಮಾದರಿಯ(ಟೆಸ್ಟ್‌, ಟಿ20 ಮತ್ತು ಏಕದಿನ) ಕ್ರಿಕೆಟ್‌ನ ಪದಾರ್ಪಣ ಪಂದ್ಯದಲ್ಲಿ ಮೂರು ಪ್ಲಸ್‌ ವಿಕೆಟ್‌ ಕಿತ್ತ ಭಾರತದ ಮೊದಲ ಬೌಲರ್‌ ಎನಿಸಿಕೊಂಡರು. ಆಸೀಸ್‌ ವಿರುದ್ಧ ಪರ್ತ್‌ನಲ್ಲಿ ಆಡಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ 48 ಕ್ಕೆ 3, ಆ ಬಳಿಕ ಇಂಗ್ಲೆಂಡ್‌ ವಿರುದ್ಧದ ಟಿ20ಯಲ್ಲಿ 33 ಕ್ಕೆ 3 ಮತ್ತು ಇದೀಗ ಇಂಗ್ಲೆಂಡ್‌ ಎದುರಿನ ಏಕದಿನದಲ್ಲಿ 53 ಕ್ಕೆ 3 ವಿಕೆಟ್‌ ಕಿತ್ತು ಈ ಸಾಧನೆಗೈದರು.

   ಮೂರನೇ ಓವರ್‌ನಲ್ಲಿ ರಾಣಾ 3 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 26 ರನ್‌ ಬಿಟ್ಟುಕೊಟ್ಟು ಸರಿಯಾಗಿ ದಂಡಿಸಿಕೊಂಡರು. ಆದರೆ ನಾಲ್ಕನೇ ಓವರ್‌ನಲ್ಲಿ ಎರಡು ವಿಕೆಟ್‌ ಕಿತ್ತು ತಮ್ಮ ಬೌಲಿಂಗ್‌ ಪ್ರದರ್ಶನವನ್ನು ತೋರಿಸಿದರು. 

   ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಉತ್ತಮ ಆರಂಭ ಪಡೆಯಿತು. ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಲಾರಂಭಿಸಿದ ಫಿಲ್‌ ಸಾಲ್ಟ್‌ ಮತ್ತು ಬೆನ್‌ ಡಕೆಟ್‌ ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಲೇ ಸಾಗಿದರು. ತಂಡದ ಮೊತ್ತ 75 ರನ್‌ ಆಗಿದ್ದಾಗ ಫಿಲ್‌ ಸಾಲ್ಟ್‌ ರನೌಟ್‌ ಬಲೆಗೆ ಬಿದ್ದರು. 2 ರನ್‌ ಅಂತರದಲ್ಲಿ ಬೆನ್‌ ಡಕೆಟ್‌ ವಿಕೆಟ್‌ ಕೂಡ ಬಿತ್ತು. ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ ಉಭಯ ಆಟಗಾರರ ವಿಕೆಟ್‌ ಪತನದ್‌ ಬಳಿಕ ದಿಢೀರ್‌ ಕುಸಿತ ಕಂಡಿತು. ಡಕೆಟ್‌ 32 ರನ್‌ ಬಾರಿಸಿದರೆ, ಸಾಲ್ಟ್‌ 43 ರನ್‌ ಗಳಿಸಿದರು.  

   ಏಕದಿನಕ್ಕೆ ಕಮ್‌ಬ್ಯಾಕ್‌ ಮಾಡಿದ ಹಿರಿಯ ಆಟಗಾರ ಜೋ ರೂಟ್‌(19), ಹ್ಯಾರಿ ಬ್ರೂಕ್‌(0) ನಿರಾಸೆ ಮೂಡಿಸಿದರು. 111 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನಾಯಕ ಜಾಸ್‌ ಬಟ್ಲರ್‌ ಮತ್ತು ಜಾಕೋಬ್ ಬೆಥೆಲ್ ಅರ್ಧಶತಕದ ಆಟವಾಡುವ ಮೂಲಕ ಆಸರೆಯಾದರು. ಆದರೆ ಈ ಜೋಡಿಯ ವಿಕೆಟ್‌ ಬಿದ್ದ ಬಳಿಕ ಮತ್ತೆ ತಂಡ ಕುಸಿತಕ್ಕೊಳಗಾಯಿತು. ಬಟ್ಲರ್‌ 52 ರನ್‌ ಬಾರಿಸಿದರೆ, ಬೆಥಲ್‌ 51 ರನ್‌ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 47.4 ಓವರ್‌ಗಳಲ್ಲಿ 248 ರನ್‌ಗೆ ಸರ್ವಪತನ ಕಂಡಿತು. ಭಾರತ ಗೆಲುವಿಗೆ 249 ರನ್‌ ಬಾರಿಸಬೇಕಿದೆ.

  ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯವಾದ ಕಾರಣ ವಿರಾಟ್ ಕೊಹ್ಲಿ ಈ ಪಂದ್ಯಕ್ಕೆ ಅಲಭ್ಯರಾದರು. ನಿರೀಕ್ಷೆಯಂತೆ ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ಕೀಪಿಂಗ್‌ ಜವಾಬ್ದಾರಿ ವಹಿಸಲಾಗಿದೆ.

Recent Articles

spot_img

Related Stories

Share via
Copy link