ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ನೀಡಿದ್ದ 5 ‘ಗ್ಯಾರಂಟಿ’ ಯೋಜನೆಗಳ ಪೈಕಿ 4 ಯೋಜನೆ ಅನುಷ್ಠಾನಗೊಂಡಿದ್ದು, 5ನೇ ಗ್ಯಾರಂಟಿ ಯುವನಿಧಿ ಯೋಜನೆಯನ್ನು ಇದೇ ತಿಂಗಳಿ (ಡಿಸೆಂಬರ್)ನಲ್ಲಿ ನಮ್ಮ ಸರಕಾರ ಜಾರಿಗೊಳಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶನಿವಾರ ಹೇಳಿದ್ದಾರೆ.
ಪಕ್ಷದ ಭರವಸೆಗಳ ಮೇಲೆ ರಾಜ್ಯದ ಜನರು ವಿಶ್ವಾಸವಿಟ್ಟು ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಕಾಂಗ್ರೆಸ್‌ಗೆ ಗೆಲ್ಲಿಸಿಕೊಟ್ಟರು. ವಾಗ್ದಾನದಂತೆ ನಡೆದುಕೊಂಡ ಪಕ್ಷದ ಸರಕಾರ ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿಗಳ ಜಾರಿಗೆ ನಿರ್ಧಾರ ಕೈಗೊಂಡು, ಆದೇಶ ಹೊರಡಿಸಿತು.
ಪ್ರಸಕ್ತ ವರ್ಷದಲ್ಲಿ ಎಲ್ಲ 5 ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ 38,000 ಕೋಟಿ ರೂ.ಗಳನ್ನು ಸರಕಾರ ಕಾಯ್ದಿರಿಸಿದ್ದು, ಯೋಜನೆಯಿಂದ ಈವರೆಗೂ 4.30 ಕೋಟಿ ಫಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. 5ನೇ ಗ್ಯಾರಂಟಿ ‘ಯುವನಿಧಿ’ಗೆ ಇದೇ ತಿಂಗಳು ನೋಂದಣಿ ಆರಂಭವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊನೆಯ ಗ್ಯಾರಂಟಿ ‘ಯುವನಿಧಿ’ ಯೋಜನೆಯಡಿ ಗೌರವಧನ ಪಡೆಯಲು ನಿರುದ್ಯೋಗಿ ಪದವೀಧರು ಮತ್ತು ಡಿಪ್ಲೋಮಾ ಹೊಂದಿದವರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಇದರೊಂದಿಗೆ, 5 ಗ್ಯಾರಂಟಿಗಳು ನಿರೀಕ್ಷಿತ ಫಲಾನುಭವಿಗಳನ್ನು ತಲುಪುತ್ತಿದ್ದು, ಉಳಿದಂತೆ ದಕ್ಷ ಮತ್ತು ಜನಪರ ಆಡಳಿತದ ಭರವಸೆಯ ಸಂಕಲ್ಪದಂತೆ ರಾಜ್ಯ ಸರಕಾರ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಮಾಸಿಕ 200 ಯೂನಿಟ್‌ವರೆಗೆ ವಿದ್ಯುತ್ ಉಪಯೋಗಿಸಿದ ರಾಜ್ಯದ 1 ಕೋಟಿ 60 ಲಕ್ಷ ಕುಟುಂಬಗಳ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದರಿಂದ ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ.
ಗೃಹ ಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಜಮಾ ಮಾಡಲಾಗುತ್ತಿದ್ದು, 1 ಕೋಟಿ 16 ಲಕ್ಷ ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ 2300 ಕೋಟಿ ಹಣ ನೇರವಾಗಿ ಜಮಾ ಆಗುತ್ತಿದೆ.
ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು 5 ಕೆಜಿ ಅಕ್ಕಿಯ ಬದಲಾಗಿ, ಪ್ರತಿ ಕೆಜಿಗೆ 34 ರೂ.ನಂತೆ ತಲಾ 170 ರೂ.ಗಳನ್ನು ಜಮಾ ಮಾಡಲಾಗುತ್ತಿದ್ದು, ಇದುವರೆಗೆ 3 ಕೋಟಿ 97 ಲಕ್ಷ ಕುಟುಂಬದ ಸದಸ್ಯರ ಖಾತೆಗಳಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು 656 ಕೋಟಿ ಹಣ ಜಮಾ ಆಗುತ್ತಿದೆ.
ಪ್ರಸ್ತುತ ವರ್ಷದಲ್ಲಿ ನಮ್ಮ ಎಲ್ಲ 5 ಗ್ಯಾರಂಟಿ ಯೋಜನೆಗಳಿಗೆ ಬೇಕಾದ 38 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಕಾಯ್ದಿರಿಸಿದೆ. ಮುಖ್ಯವಾಗಿ ಈ ನಾಲ್ಕೂ ಪ್ರಮುಖ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 4 ಕೋಟಿ 30 ಲಕ್ಷ ಫಲಾನುಭವಿಗಳು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಪ್ರಸ್ತುತ ನಮ್ಮ ಐದನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಇದೇ ಡಿಸೆಂಬರ್ 26 ರಿಂದ ನಿರುದ್ಯೋಗಿ ಪದವೀಧರ ಮತ್ತು ಡಿಪ್ಲೋಮ ಪದವಿ ಪಡೆದವರು ಗೌರವ ಧನ ಪಡೆಯಲು ನೋಂದಣಿ ಪ್ರಕ್ರಿಯೆಯು ಪ್ರಾರಂಭ ಆಗಲಿದೆ. ನಮ್ಮ ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿಯನ್ನು ಸರ್ಕಾರ ವಾಗ್ದಾನದಂತೆ ಜಾರಿಗೊಳಿಸಲಿದೆ ಎಂದಿದ್ದಾರೆ.