ಬೆಂಗಳೂರು:
ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ 91ನೇ ಆವೃತ್ತಿ ಇಂದಿನಿಂದ ಆರಂಭಗೊಳ್ಳಲಿದೆ. ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ ರಾಜ್ಕೋಟ್ನಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಅಭಿಯಾನ ಆರಂಭಿಸಲಿದ್ದು, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ.
ಅನುಭವಿ ಬ್ಯಾಟರ್ ಕರುಣ್ ನಾಯರ್ 3 ವರ್ಷಗಳ ಬಳಿಕ ರಾಜ್ಯ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಲಿದೆ. ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ದೇವದತ್ ಪಡಿಕ್ಕಲ್ ಕೂಡ ರಾಜ್ಯ ತಂಡವನ್ನು ಕೂಡಿಕೊಂಡಿದ್ದಾರೆ. ಜತೆಗೆ ಯುವ ಬ್ಯಾಟರ್ಗಳಾದ ಆರ್. ಸ್ಮರಣ್, ನಿಕಿನ್ ಜೋಸ್, ವಿಕೆಟ್ ಕೀಪರ್ ಶ್ರೀಜಿತ್ ಕೆಎಲ್ ಕಳೆದ ಆವೃತ್ತಿಯ ಫಾರ್ಮ್ ಮುಂದುವರಿಸುವ ನಿರೀಕ್ಷೆ ಇದೆ.
ವೈಶಾಕ್ ವಿಜಯ್ಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ. ಒಳಗೊಂಡ ವೇಗದ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಸೌರಾಷ್ಟ್ರ ತಂಡಕೆ ಜೈದೇವ್ ಉನಾದ್ಕತ್ ಸಾರಥ್ಯ ವಹಿಸಿದ್ದಾರೆ. ಹಾರ್ವಿಕ್ ದೇಸಾಯಿ, ಅರ್ಪಿತ್ ವಸವಾಡ, ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಚೇತನ್ ಸಕಾರಿಯಾ ಮತ್ತು ಧಮೇರ್ಂದ್ರಸಿನ್ಹಾ ಜಡೇಜಾ ತಂಡದ ಇತರ ಪ್ರಮುಖ ಆಟಗಾರರು.
ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್ 19ರವರೆಗೆ ತಲಾ 5 ಲೀಗ್ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್ಬಾಲ್ ಕ್ರಿಕೆಟ್ ಟೂರ್ನಿಗಳು ಅಂದರೆ ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 (ನ. 26-ಡಿ.8) ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ (ಡಿ.24-ಜ.8) ಟೂರ್ನಿಗಳು ನಡೆಯಲಿವೆ.
ನಂತರ ಜ.22ರಿಂದ ರಣಜಿಯ ಕೊನೇ 2 ಲೀಗ್ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 6ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ. ಫೆಬ್ರವರಿ 24ರಿಂದ 28ರವರೆಗೆ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಹಾಲಿ ದೇಶೀಯ ಕ್ರಿಕೆಟ್ ಋತುವಿಗೆ ತೆರೆ ಬೀಳಲಿದೆ. ಟೂರ್ನಿಯಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ.








