ನವದೆಹಲಿ:
ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸುಪ್ರೀಂ ಕೋರ್ಟ್ ಮಂಗಳವಾರ ಬಂಧನದಿಂದ ರಕ್ಷಣೆ ನೀಡಿದೆ. ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಲ್ಹಾಬಾದಿಯಾ ಅವರ ಹೇಳಿಕೆಗಳ ಬಗ್ಗೆ ಕೆರಳಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ರಣವೀರ್ ಅವರ ಮನಸ್ಸಿನಲ್ಲಿದ್ದ ಕೊಳಕನ್ನು ಯೂಟ್ಯೂಬ್ ಶೋನಲ್ಲಿ ವಾಂತಿ ಮಾಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಬಲವಂತದ ಕ್ರಮದಿಂದ ರಣವೀರ್ ಅಲ್ಹಾಬಾದಿಯಾ ಅವರನ್ನು ರಕ್ಷಿಸಬೇಕು. ಮೇಲಾಗಿ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಅವರ ಪರ ಹಿರಿಯ ವಕೀಲ ಅಭಿನವ್ ಚಂದ್ರಚೂಡ್ ಅವರ ಮನವಿಗೆ ಒಪ್ಪಿಗೆ ನೀಡಿದ ಸುಪ್ರೀಂ ಕೋರ್ಟ್, ಬಂಧನದಿಂದ ರಕ್ಷಣೆ ನೀಡಿದೆ.
ಮುಂಬೈ ಮತ್ತು ಗುವಾಹಟಿಯಲ್ಲಿ ಸದ್ಯ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಎಂಬ ಯೂಟ್ಯೂಬ್ ಶೋನಲ್ಲಿ ಅವರು ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಮತ್ತೆ ಅವರ ವಿರುದ್ಧ ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
