ನವೆಂಬರ್‌ನಲ್ಲಿ ರನ್ಯಾ ರಾವ್ ಜೊತೆ ವಿವಾಹ, ಡಿಸೆಂಬರ್‌ನಲ್ಲಿ ದೂರ: ನ್ಯಾಯಾಲಯಕ್ಕೆ ಜತಿನ್ ಹುಕ್ಕೇರಿ

ಬೆಂಗಳೂರು:

   ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರ ಪತಿ ಜತಿನ್ ಹುಕ್ಕೇರಿ ಕೂಡ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಧನದಿಂದ ವಿನಾಯಿತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಮುಂದಿನ ವಿಚಾರಣೆಯವರೆಗೆ ಜತಿನ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ಆದೇಶಿಸಿದೆ.

   ಜತಿನ್ ಹುಕ್ಕೇರಿ ಅವರ ಮಂಡಿಸಿದ ವಕೀಲ ಪ್ರಭುಲಿಂಗ ನಾವದಗಿ ಅವರು, ತಮ್ಮ ಕಕ್ಷಿದಾರರು ನವೆಂಬರ್‌ನಲ್ಲಿ ರನ್ಯಾ ರಾವ್ ಅವರನ್ನು ವಿವಾಹವಾದರು. ಆದರೆ, ಕೆಲವು ಸಮಸ್ಯೆಗಳಿಂದಾಗಿ ಡಿಸೆಂಬರ್‌ನಿಂದ ಅನಧಿಕೃತವಾಗಿ ಅವರಿಂದ ಬೇರ್ಪಟ್ಟಿದ್ದಾರೆ ಎಂದು ಹೇಳುವ ಮೂಲಕ ಬಂಧನದಿಂದ ವಿನಾಯಿತಿ ಕೋರಿದ್ದರು.

   ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಪರ ವಕೀಲ ಮಧು ರಾವ್, ಮುಂದಿನ ಸೋಮವಾರ ತಮ್ಮ ಆಕ್ಷೇಪಣೆಯನ್ನು ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ಜತಿನ್ ಹುಕ್ಕೇರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ತನ್ನ ಹಿಂದಿನ ಆದೇಶವು ಮಾರ್ಚ್ 24ರ ಸೋಮವಾರ ನಡೆಯಲಿರುವ ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಮುಂದಿನ ವಿಚಾರಣೆಯಂದು DRI ತನ್ನ ಆಕ್ಷೇಪಣೆ ಸಲ್ಲಿಸಲಿದೆ.

  ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿರುವ ರನ್ಯಾ ರಾವ್ ಅವರೊಂದಿಗಿನ ಸಂಬಂಧದ ಕಾರಣಕ್ಕೆ ತಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಬಹುದೆಂಬ ಭಯದಿಂದ ಜತಿನ್ ಹುಕ್ಕೇರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ, ಹುಕ್ಕೇರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ಮಾರ್ಚ್ 11 ರಂದು ಆದೇಶಿಸಿತು.ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ನಂತರ ಬಂಧನದಲ್ಲಿರುವ ರಾವ್, ಕೆಳ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಶನಿವಾರ ಸೆಷನ್ಸ್ ನ್ಯಾಯಾಲಯದಲ್ಲಿ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಸೆಷನ್ಸ್ ನ್ಯಾಯಾಲಯವು ಇಂದು ಅರ್ಜಿಯನ್ನು ವಿಚಾರಣೆ ನಡೆಸುವ ನಿರೀಕ್ಷೆಯಿದೆ. 

   ಮಾರ್ಚ್ 3 ರ ಸೋಮವಾರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿ ರನ್ಯಾ ರಾವ್ ಅವರನ್ನು ತಪಾಸಣೆ ಮಾಡಿದಾಗ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ನಟಿಯನ್ನು ಡಿಐರ್ಐ ಅಧಿಕಾರಿಗಳು ಬಂಧಿಸಿದ್ದರು.

  ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐಷಾರಾಮಿ ಫ್ಲಾಟ್‌ನಿಂದ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಫ್ಲಾಟ್‌ಗೆ ನಟಿ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂದು ಎಂದು ವರದಿಯಾಗಿದೆ.

   ಚಿಕ್ಕಮಗಳೂರಿನವರಾದ ರನ್ಯಾ ಅವರು 2014ರಲ್ಲಿ ಕಿಚ್ಚ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ತಮಿಳು ಸಿನಿಮಾದಲ್ಲಿಯೂ ರನ್ಯಾ ಬಣ್ಣ ಹಚ್ಚಿದ್ದಾರೆ.