ಮುಂಬೈ:
ಎರಡೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ 30 ವರ್ಷದ ಮಹಿಳೆ ಮತ್ತು ಆಕೆಯ 19 ವರ್ಷದ ಪ್ರಿಯಕರನನ್ನು ಸೋಮವಾರ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈಯ ಮಾಲ್ವಾನಿ ಜನಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ಕರೆತರಲಾದ ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ ವೈದ್ಯರುಗೆ ಆಕೆಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿದ್ದು ಕಂಡುಬಂದಿದೆ. ತಕ್ಷಣವೇ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ವೈದ್ಯಕೀಯ ವರದಿಗಳ ಆಧಾರದ ಮೇಲೆ ಮಹಿಳೆ ಮತ್ತು ಆಕೆಯ ಪ್ರಿಯಕರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳು ಮತ್ತು ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ, ಕೊಲೆ ಆರೋಪಗಳನ್ನು ದಾಖಲಿಸಲಾಗಿದೆ.
“ಆರೋಪಿ ಮಹಿಳೆ ಮತ್ತು 19 ವರ್ಷದ ಯುವಕ ಪರಸ್ಪರ ಸಂಬಂಧದಲ್ಲಿದ್ದರು. ಮೂರು ವರ್ಷಗಳ ಹಿಂದೆ ಮಹಿಳೆ ಗರ್ಭಿಣಿಯಾಗಿದ್ದಾಗ ಪತಿ ಆಕೆಯನ್ನು ತೊರೆದು ವಿಚ್ಛೇದನ ಪಡೆದಿದ್ದ. ನಂತರ ಆಕೆ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು ಮತ್ತು ಆರೋಪಿ ಯುವಕನ ಜತೆ ಸಂಬಂಧ ಬೆಳೆಸಿಕೊಂಡಿದ್ದಳುʼʼ ಎಂದು ಪೊಲೀಸರು ತಿಳಿಸಿದ್ದಾರೆ.
“ಕಳೆದ ರಾತ್ರಿ, ಆರೋಪಿಯು ಬಾಲಕಿಯ ತಾಯಿಯ ಮುಂದೆಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯು ನೋವಿನಿಂದ ಕಿರುಚಾಡಿ ನಂತರ ಮೃತಪಟ್ಟಿದ್ದಾಳೆ” ಎಂದು ಅಧಿಕಾರಿ ವಿವರಿಸಿದ್ದಾರೆ. ಘಟನೆಯ ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಹಿಳೆ ಆರಂಭದಲ್ಲಿ ವೈದ್ಯರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸಿ, ತನ್ನ ಮಗಳಿಗೆ ಮೂರ್ಛೆ ರೋಗವಿದೆ ಎಂದು ಹೇಳಿದ್ದಳು. ಆದಾಗ್ಯೂ, ವೈದ್ಯರ ಪರೀಕ್ಷೆಯಿಂದ ಸತ್ಯ ಬಯಲಿಗೆ ಬಂದಿದೆ.
ವೈದ್ಯಕೀಯ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಘೋರ ಘಟನೆಯು ಸ್ಥಳೀಯ ಸಮುದಾಯದಲ್ಲಿ ಆಘಾತ ಮತ್ತು ಆಕ್ರೋಶವನ್ನು ಉಂಟು ಮಾಡಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
