ಮಂಡಿಪೇಟೆ ಸರ್ಕಲ್‍ನಲ್ಲಿ ದಿಢೀರ್ ರಸ್ತೆ ಕುಸಿತ

ತುಮಕೂರು:

ತಪ್ಪಿದ ಭಾರಿ ಅನಾವುತ: ಅವೈಜ್ಞಾನಿಕ ರಸ್ತೆ ಕಾಮಗಾರಿ ಆರೋಪ

ನಗರದ ಮಂಡಿಪೇಟೆ ಸರ್ಕಲ್‍ನಲ್ಲಿ ರಸ್ತೆ ನಡುವೆ ಬೃಹತ್ ಆಕಾರದ ಗುಂಡಿ ಬಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ರಸ್ತೆ ಸದಾ ಜನನಿಬಿಡ ರಸ್ತೆಯಾಗಿದ್ದು, ವಾಹನ ದಟ್ಟಣೆ ಇರುತ್ತದೆ. ಸುಮಾರು 8ರಿಂದ 10 ಅಡಿಗಳಷ್ಟು ಆಳ ಬಿದ್ದಿದ್ದು, ಗುಂಡಿ ತೆರೆದುಕೊಂಡಾಗ ಯಾವುದಾದರೂ ವಾಹನಗಳು ಅದರ ಮೇಲೆ ಬಂದಿದ್ದರೆ ಭಾರಿ ಅನಾಹುತವೇ ಸಂಭವಿಸಿಬಿಡುತ್ತಿತ್ತು.

ಬಹಳ ವರ್ಷಗಳಿಂದ ಮಂಡಿಪೇಟೆ ಮುಖ್ಯರಸ್ತೆ ದುರಸ್ತಿಗೆ ಜನ ಮತ್ತು ಅಲ್ಲಿನ ವ್ಯಾಪಾರಸ್ಥರು ಒತ್ತಾಯಿಸುತ್ತಲೇ ಬಂದಿದ್ದರು. ಸ್ಮಾರ್ಟ್ ಸಿಟಿ ಯೋಜನೆ ಸಹಕಾರದೊಂದಿಗೆ ಇಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ಇತ್ತೀಚೆಗಷ್ಟೆ ಅಂದರೆ 3 ತಿಂಗಳ ಸಮಯದಲ್ಲಿ ಕಾಮಗಾರಿ ಮುಗಿದು ಜನಸಂಚಾರಕ್ಕೆ ಮುಕ್ತವಾಗಿತ್ತು.

ಆದರೆ ಕಾಮಗಾರಿ ಮುಗಿದ ಕೆಲವೇ ತಿಂಗಳಲ್ಲಿ ಇಲ್ಲಿ ಭಾರಿ ಗಾತ್ರದ ಗುಂಡಿ ಬಿದ್ದಿರುವುದರಿಂದ ರಸ್ತೆ ಕಾಮಗಾರಿ ನಿರ್ವಹಣೆ ಮಾಡುವಾಗ ಸ್ಮಾರ್ಟ್‍ಸಿಟಿ ಯೋಜನೆ ಅಧಿಕಾರಿಗಳು ಇದನ್ನು ಗಮನಿಸಲಿಲ್ಲವೇ? ಎಂಬ ಅಕ್ರೋಶ ಅಲ್ಲಿನ ಕೆಲವರದ್ದು. ವಿವೇಕಾನಂದ ರಸ್ತೆ ಪದೇ ಪದೇ ಈ ರೀತಿ ಅವಾಂತರ ಸೃಷ್ಟಿಯಾಗುತ್ತಿದ್ದು, ಈಗ ಮಂಡಿಪೇಟೆ ರಸ್ತೆ ಅದೇ ರೀತಿ ಆಗತೊಡಗಿದೆ.

ಈ ರಸ್ತೆಯಲ್ಲಿ ಬೃಹತ್ ಗಾತ್ರದ ಲಾರಿಗಳು, ವಾಹನಗಳು ಓಡಾಡುತ್ತವೆ. ಆದಕಾರಣ ರಸ್ತೆ ಕುಸಿತ ಉಂಟಾಗಿದೆ ಎಂದು ಕೆಲವು ಅಧಿಕಾರಿಗಳು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಸೇವಕ ನಟರಾಜ್ ಕಳೆದ 50 ವರ್ಷಗಳಿಂದಲೂ ಇಲ್ಲಿ ದಿನಸಿ ಲಾರಿಗಳು ಓಡಾಡುತ್ತವೆ. ಯಾವುದೇ ಭೂ ಕುಸಿತವಾಗಿಲ್ಲ.

50ರಿಂದ 60ಟನ್ ಜಲ್ಲಿ ಲಾರಿಗಳು ಹೆಚ್ಚು ಓಡಾಡುತ್ತಿದ್ದು, ಇವುಗಳ ನಿಯಂತ್ರಣವಾಗಬೇಕು. ಇಲ್ಲಿ ದಿನಗೂಲಿಗಳು ಹೆಚ್ಚು ಓಡಾಡುತ್ತಾರೆ. ಅವರ ಜೀವಕ್ಕೆ ತೊಂದರೆಯಾಗುತ್ತದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು ಎನ್ನುವ ಅವರು ಸ್ಮಾರ್ಟ್ ಸಿಟಿ ವತಿಯಿಂದ ನಡೆದಿರುವ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಇಂತಹ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದರು.

ಕಳೆದ 20 ವರ್ಷಗಳ ಹಿಂದೆ ಒಳ ಚರಂಡಿ ಮಂಡಳಿ ವತಿಯಿಂದ ಇಲ್ಲಿ ಯುಜಿಡಿ ಪೈಪ್ ಲೈನ್ ಅಳವಡಿಸಲಾಗಿದೆ. ತುಂಬಾ ಅಳೆಯದಾದ ಈ ಯುಜಿಡಿ ಚರಂಡಿ ವ್ಯವಸ್ಥೆಯನ್ನು ರಸ್ತೆ ಗಾಮಗಾರಿ ಮಾಡುವಾಗ ಗಮನಿಸಬೇಕಾಗಿತ್ತು. ಆದರೆ ಈ ಬಗ್ಗೆ ಗಮನಹರಿಸದ ಪರಿಣಾಮ ಪೈಪ್ ಲೈನ್ ಸಮಸ್ಯೆಯಾಗಿ ನೀರು ಹರಿಯುತ್ತಿದೆ. ಪರಿಣಾಮವಾಗಿ ಗುಂಡಿ ಬೀಳಲು ಕಾರಣವಾಗಿದ ಎನ್ನುತ್ತಾರೆ. ಅಲ್ಲಿನ ಕೆಲವು ವರ್ತಕರು.

ನಗರ ಪಾಲಿಕೆಯಿಂದ ಗುಂಡಿ ದುರಸ್ತಿ :

1993ರ ಅವಧಿಯಲ್ಲಿ ಇಲ್ಲಿ ವಾಟರ್ ಬೋರ್ಡ್ ವತಿಯಿಂದ ಯುಜಿಡಿ ಲೈನ್ ಮಾಡಲಾಗಿದೆ. ತುಂಬಾ ಹಳೆಯದಾದ ಈ ಲೈನ್ ದುರಸ್ತಿ ಮಾಡಬೇಕಿದೆ. ಇಲ್ಲಿ ಜಲ್ಲಿ ತುಂಬಿದ ಲಾರಿಗಳು, ಭಾರಿ ವಾಹನಗಳು ಸಂಚರಿಸುತ್ತಿವೆ.

ಇದರ ಪರಿಣಾಮವಾಗಿ ಒಳಚರಂಡಿ ಸಮಸ್ಯೆ ನಿರ್ಮಾಣವಾಗಿದ್ದು, ಯುಜಿಡಿ ಲೈನ್ ಸರಿಪಡಿಸಬೇಕು ನಗರಪಾಲಿಕೆ ವತಿಯಿಂದ ಕೂಡಲೇ ಈ ಕಾರ್ಯ ಆರಂಭಿಸಲಾಗುವುದು. ಹೊಸ ಲೈನ್ ಮಾಡಲಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತ್ವರಿತವಾಗಿ 15ರಿಂದ 20 ದಿನಗಳ ಒಳಗೆ ಇದನ್ನು ಸರಿಪಡಿಸಲಾಗುವುದು.

 –  ರೇಣುಕಾ, ಆಯುಕ್ತರು, ನಗರ ಪಾಲಿಕೆ

ಈ ಭಾಗದಲ್ಲಿ ಆಭರಣದ ಅಂಗಡಿಗಳು ಇರುವುದರಿಂದ ಸಲ್ ಪ್ಯೂರಿಕ್ ಆಸಿಡ್ ಭೂಮಿಗೆ ಸೇರ್ಪಡೆಯಾಗಿ ಮಣ್ಣಿನ ಸವಕಳಿ ಉಂಟಾಗುವ ಸಾಧ್ಯತೆಗಳೂ ಇವೆ. ಮುಖ್ಯವಾಗಿ 22 ವರ್ಷಗಳ ಹಳೆಯದಾದ ಯುಜಿಡಿ ಲೈನ್ ಸರಿಪಡಿಸಬೇಕಿದೆ. ಲೈನ್ ಹಳೆಯದಾಗಿದ್ದು, ಡ್ಯಾಮೇಜ್ ಆಗಿದೆ. ಇದರಿಂದ ಭೂಕುಸಿತ ಉಂಟಾಗಿದೆ. ಇದೇ ಪ್ರಥಮ ಬಾರಿ ಈ ರಸ್ತೆಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಯುಜಿಡಿ ಲೈನ್ ಬದಲಾಯಿಸಬೇಕು ಎನ್ನುತ್ತಾರೆ ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್ ಒಬ್ಬರು.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link