ಬಿಹಾರ:
ಬಿಹಾರದ ನರ್ಕಾತಿಯಾಗಂಜ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಬಿಜೆಪಿಯ ರಶ್ಮಿ ವರ್ಮಾ ವಿಧಾನ ಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಬಿಹಾರ ವಿಧಾನ ಸಭೆಯ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾರ ಕಚೇರಿಗೆ ತಮ್ಮ ರಾಜೀನಾಮೆ ಪತ್ರವನ್ನು ರಶ್ಮಿ ಸಲ್ಲಿಸಿದ್ದಾರೆ.
ಆದರೆ ಕೋವಿಡ್-19 ನಿರ್ಬಂಧಗಳಿಂದಾಗಿ ವಿಧಾನ ಸಭೆ ಮುಚ್ಚಲ್ಪಟ್ಟಿರುವ ಕಾರಣ ರಶ್ಮಿರ ರಾಜೀನಾಮೆಗೆ ಇನ್ನೂ ಅಂಗೀಕಾರ ಬಿದ್ದಿಲ್ಲ.
ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಾ. ಸಂಜಯ್ ಜೈಸ್ವಾಲ್, “ಕೌಟುಂಬಿಕ ಕಾರಣಗಳಿಂದಾಗಿ ರಶ್ಮಿ ರಾಜೀನಾಮೆಗೆ ಮುಂದಾಗಿದ್ದರು. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರ ರಾಜೀನಾಮೆಯ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ,” ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (ಯುಪಿಟಿಇಟಿ) ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಗರಣದಲ್ಲಿ ರಶ್ಮಿ ಸಹೋದರ ರಾಯ್ ಅನೂಪ್ ಪ್ರಸಾದ್ ಹೆಸರು ಕೇಳಿ ಬಂದಿದೆ. ದೆಹಲಿಯಲ್ಲಿ ಪ್ರಸಾದ್‌ರನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ಪೊಲೀಸರು ಬಂಧಿಸಿದ್ದಾರೆ.
2020ರ ವಿಧಾನ ಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿಕೊಂಡ ರಶ್ಮಿಗೆ ಪಶ್ಚಿಮ ಚಂಪರಣ ಜಿಲ್ಲೆಯ ನರ್ಕಾತಿಯಾಗಂಜ್‌ನಿಂದ ಟಿಕೆಟ್ ನೀಡಲಾಗಿತ್ತು.
2015 ರಲ್ಲಿ ಇದೇ ಕ್ಷೇತ್ರದಿಂದ ಟಿಕೆಟ್ ಸಿಗದೇ ಇರುವ ಕಾರಣ ರಶ್ಮಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬೆನ್ನಿಗೇ ರಶ್ಮಿರ ರಾಜೀನಾಮೆ ದೊಡ್ಡ ಗದ್ದಲ ಸೃಷ್ಟಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
