ಬೆಂಗಳೂರು:
“ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ವೀಕ್ಷಣೆ ಮಾಡಲು ರಾತ್ರಿ ಸಂಚಾರ ನಡೆಸುತ್ತೇನೆ. ಎರಡು ಮೂರು ದಿನಗಳಲ್ಲಿ ದಿನಾಂಕ ತಿಳಿಸುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಎಷ್ಟು ರಸ್ತೆಗುಂಡಿಗಳಿವೆ ಎಂಬುದರ ಬಗ್ಗೆ ನನ್ನ ಬಳಿ ಲೆಕ್ಕವಿದೆ. ಅಭಿಯಾನದ ರೀತಿ ಕೆಲಸ ಮಾಡಿದ್ದೇವೆ. ಇದು ಸಾಧನೆಯಲ್ಲ ಜವಾಬ್ದಾರಿ. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ಮೇಲೆ ಅಧಿಕಾರಿಗಳು ಇಷ್ಟು ತ್ವರಿತವಾಗಿ ಕೆಲಸ ಮಾಡಿದ್ದನ್ನು ನಾನು ನೋಡಿರಲಿಲ್ಲ” ಎಂದು ಹೇಳಿದರು.
“ರಸ್ತೆಗುಂಡಿಗಳನ್ನು ಮುಚ್ಚಿಸುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಗಲು- ರಾತ್ರಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಮಧ್ಯೆ ಮಳೆ ಬಂದಿದೆ. ನೀವು (ಮಾಧ್ಯಮ)ಗಳು ಅಷ್ಟೋ, ಇಷ್ಟೊ ಕೆಲಸ ಮಾಡಿದ್ದಾರೆ ಎಂದು ವರದಿ ಮಾಡಿದ್ದೀರಿ. ನಾವು ಬದ್ಧತೆಯಿಂದ ನಾಗರೀಕರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇವೆ” ಎಂದು ಹೇಳಿದರು. ಬೇರೆ ರಾಜ್ಯಗಳಿಗೆ ಅವಮಾನ ಮಾಡಲು ಇಷ್ಟವಿಲ್ಲ”ನಾನು ಬೇರೆ ರಾಜ್ಯಗಳಿಗೆಲ್ಲಾ ಭೇಟಿ ನೀಡಿದ್ದೇನೆ. ಅಲ್ಲಿನ ರಸ್ತೆಯ ವಿಡಿಯೋಗಳನ್ನು ಹಾಕಿದರೆ ಆ ರಾಜ್ಯಗಳಿಗೆ ಅವಮಾನವಾಗುತ್ತದೆ. ಅದಕ್ಕಿಂತ ಉತ್ತಮವಾಗಿ ನಮ್ಮವರು ಇಲ್ಲಿನ ರಸ್ತೆಗಳ ಪರಿವರ್ತನೆ ಮಾಡಬೇಕು ಎಂದು ಕೆಲಸ ಮಾಡಿದ್ದಾರೆ. ಅದರಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ” ಎಂದರು.