21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?
ಅದು 1995ರ ಸಮಯ. ಆಗ ರವೀನಾ ಟಂಡನ್​ ಅವರಿಗೆ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ. ಆಗಲೇ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿದ್ದರು.

ನಟಿ ರವೀನಾ ಟಂಡನ್​ (Raveena Tandon) ಅವರು ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.

     1990ರ ದಶಕದಲ್ಲಿ ಅವರು ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದರು. ಈಗಲೂ ಅವರಿಗೆ ಸಖತ್​ ಬೇಡಿಕೆ ಇದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದಲ್ಲಿ ರಮಿಕಾ ಸೇನ್​ ಎಂಬ ಪಾತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

        ‘ಉಪೇಂದ್ರ’ ಚಿತ್ರದ ಬಳಿಕ ಇದು ಕನ್ನಡದಲ್ಲಿರವೀನಾ ಟಂಡನ್​ ಅವರಿಗೆ 2ನೇ ಸಿನಿಮಾ. ಇನ್ನು, ಅವರ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಸದಾ ಆಸಕ್ತಿ ತೋರಿಸುತ್ತಾರೆ. ಒಂದು ಕಾಲದಲ್ಲಿ ರವೀನಾ ಟಂಡನ್​ ಅವರು ತಮ್ಮ ವೈಯಕ್ತಿಕ ಜೀವನದ ಅತಿ ಮುಖ್ಯ ವಿಚಾರವನ್ನೇ ಮುಚ್ಚಿಟ್ಟಿದ್ದರು.

        ಅಚ್ಚರಿ ಎಂದರೆ ತಮ್ಮ 21ನೇ ವಯಸ್ಸಿನಲ್ಲಿಯೇ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಆದರೆ ಆ ವಿಷಯವನ್ನು ಅವರು ಹಲವು ವರ್ಷಗಳ ಕಾಲ ಗುಟ್ಟಾಗಿ ಇಟ್ಟಿದ್ದರು. ದತ್ತು ಪುತ್ರಿಯರ ವಿಚಾರದಲ್ಲಿ ತಾವು ಗೌಪ್ಯತೆ ಕಾಪಾಡಿಕೊಂಡಿದ್ದು ಯಾಕೆ ಎಂಬುದರ ಕುರಿತು ರವೀನಾ ಟಂಡನ್​ ಮಾತನಾಡಿದ್ದಾರೆ. ಈ ಕುರಿತು ‘ಹಿಂದುಸ್ತಾನ್​ ಟೈಮ್ಸ್​’ ಲೇಖನ ಪ್ರಕಟಿಸಿದೆ.

ಅದು 1995ರ ಸಮಯ. ಆಗ ರವೀನಾ ಟಂಡನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷ ಕಳೆದಿತ್ತು. ಅಷ್ಟರಲ್ಲಾಗಲೇ ಅವರು ತುಂಬ ಫೇಮಸ್​ ಆಗಿದ್ದರು. ಪತ್ತರ್​ ಕೆ ಫೂಲ್​, ಮೊಹ್ರಾ, ದಿಲ್​ವಾಲೆ, ಲಾಡ್ಲಾ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕೇವಲ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ.

ಆಗ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡರು. ಆದರೆ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಿರಾಕರಿಸಿದರು. ಅದಕ್ಕೆ ಕಾರಣ; ಟ್ಯಾಬ್ಲಾಯ್ಡ್ ​ಪ್ರತಿಕೆಗಳ ಭಯ. ಮದುವೆ ಆಗದೆಯೇ ಮಕ್ಕಳನ್ನು ದತ್ತು ಪಡೆದ ನಟಿಯ ಬಗ್ಗೆ ಆ ಪತ್ರಿಕೆಗಳು ಕೆಟ್ಟ ವರದಿ ಪ್ರಕಟ ಮಾಡುತ್ತವೆ ಎಂಬ ಅಳುಕು ರವೀನಾ ಟಂಡನ್​ ಅವರಿಗೆ ಇತ್ತು.

‘ಅದು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಕೆಟ್ಟ ಕಾಲ ಆಗಿತ್ತು. ತುಂಬ ಕೆಟ್ಟ ಹೆಡ್​ಲೈನ್​ ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ಯಾವ ವಿಚಾರ ಇಟ್ಟುಕೊಂಡು ಬೇಕಿದ್ದರೂ ಹಗರಣ ಸೃಷ್ಟಿ ಮಾಡುತ್ತಿದ್ದರು.

ನಾನು ಹೆಣ್ಣುಮಕ್ಕಳನ್ನು ದತ್ತು ಪಡೆದಾಗ ಅವರ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಅವರು 10ನೇ ತರಗತಿ ಮುಗಿಸಿದ ನಂತರವೇ ನನ್ನ ಜೊತೆ ಶೂಟಿಂಗ್​ಗೆ ಬರಲು ಆರಂಭಿಸಿದರು. ಈ ಹುಡುಗಿಯರು ಯಾರು ಅಂತ ಎಲ್ಲರೂ ಕೇಳಲು ಶುರು ಮಾಡಿದರು. ಆಗ ನಾನು ಎಲ್ಲವನ್ನೂ ಹೇಳಿದೆ’ ಎಂದಿದ್ದಾರೆ ರವೀನಾ ಟಂಡನ್​.

‘ಮಕ್ಕಳ ಬಗ್ಗೆ ಏನೇ ಹೇಳಿದರೂ ಅದನ್ನು ಇಟ್ಟುಕೊಂಡು ಕೆಟ್ಟದಾಗಿ ಬರೆಯುತ್ತಾರೆ ಎಂಬ ಭಯ ನನ್ನಲ್ಲಿ ಇತ್ತು. ಈಕೆ ಗುಟ್ಟಾಗಿ ಮಗು ಮಾಡಿಕೊಂಡಿದ್ದಾಳೆ ಅಂತ ಮ್ಯಾಗಜಿನ್​ನವರು ಹೇಳಿಬಿಡುತ್ತಿದ್ದರು. ಮಕ್ಕಳ ತಂದೆ ಯಾರು ಅಂತಲೂ ಊಹಿಸಲು ಶುರು ಮಾಡುತ್ತಿದ್ದರು. ಅದು ಅಂಥ ಕಾಲ ಆಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ನಾನು ಮೌನವಾಗಿದ್ದೆ’ ಎಂದು ರವೀನಾ ಟಂಡನ್​ ಹೇಳಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap