ಬೆಂಗಳೂರು :
ನಟಿ ರಶ್ಮಿಕಾ ಮಂದಣ್ಣಗೆ ಶಾಸಕ ರವಿ ಗಣಿಗ ಟೀಕಿಸಿದ್ದರ ಹಿನ್ನೆಲೆ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಶ್ಮಿಕಾ ಮಂದಣ್ಣಗೆ ಭಯ ಹುಟ್ಟಿಸಲಾಗಿದೆ ಎಂದು ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ಕೊಡವ ಸಂಘಟನೆಯಿಂದ ಪತ್ರ ಬರೆಯಲಾಗಿದೆ.
ಮತ್ತೆ ರಶ್ಮಿಕಾ ವಿರುದ್ಧ ರವಿ ಗಣಿಗ ನಾಲಿಗೆ ಹರಿಬಿಟ್ಟಿದ್ದಕ್ಕೆ ಕೊಡವ ಸಂಘಟನೆ ನಟಿಯ ಬೆನ್ನಿಗೆ ನಿಂತಿದೆ. ರಶ್ಮಿಕಾ ಅವರನ್ನು ಬೆದರಿಸಿ ಭಯ ಹುಟ್ಟಿಸಲಾಗಿದೆ. ಅವರು ಅತಿಸೂಕ್ಷ್ಮ ಬುಡಕಟ್ಟು ಸಮುದಾಯದವರಾಗಿದ್ದಾರೆ. ಅವರನ್ನು ಬೆದರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಹಾಗಾಗಿ ಶಾಸಕನ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಾಚಪ್ಪ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಚಿತ್ಸೋತ್ಸವಕ್ಕೆ ಕರೆದರೆ ರಶ್ಮಿಕಾ ಟೈಮ್ ಇಲ್ಲ ಅಂತಾರೆ ಎಂದು ನಟಿಯ ವಿರುದ್ಧ ರವಿ ಗಣಿಗ ಕೆಂಡಕಾರಿದ್ದರು. ಈ ಬೆನ್ನಲ್ಲೇ ನಟಿಗೆ ಭದ್ರತೆ ಬೇಕು ಅಂತ ಕೊಡವ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ರವಿ ಗಣಿಗ ಮತ್ತೆ ಪತ್ರಿಕ್ರಿಯೆ ನೀಡಿದ್ದರು. ಇನ್ನೂ ಪ್ರಚಾರಕೋಸ್ಕರ ನಾಚಪ್ಪ ಪತ್ರ ಬರೆದಿರಬಹುದು. ಅದಕ್ಕೆ ಜಾಸ್ತಿ ಮನ್ನಣೆ ಕೊಡೋ ಅವಶ್ಯಕತೆಯಿಲ್ಲ ಎಂದು ವಿಧಾನಸೌಧದಲ್ಲಿ ಶಾಸಕ ಹೇಳಿಕೆ ನೀಡಿದ್ದರು.
ಆವತ್ತು ನಾನು ಆಡಿದ ಮಾತಿಗೆ ಈಗಲೂ ಬದ್ಧನಿದ್ದೇನೆ. ನಮ್ಮ ಜಲ, ನಮ್ಮ ಭಾಷೆ, ನಮ್ಮ ರಾಜ್ಯವೇ ಮುಖ್ಯ. ನಮ್ಮ ವೈಯಕ್ತಿಕ ಹಿತಾಸ್ತಕಿ ಅಲ್ಲ. ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಾಗ ಅವರು ನಿರಾಕರಿಸಿದ್ದು, ಹಲವಾರು ವೇದಿಕೆಯಲ್ಲಿ ಕನ್ನಡ ಮತ್ತು ಕರ್ನಾಟಕವನ್ನು ಅವಮಾನಕಾರಿಯಾಗಿ ರಶ್ಮಿಕಾ ಮಾತನಾಡಿರೋದು ಇಂದಿಗೂ ಖಂಡಿಸುತ್ತೇನೆ. ಇವತ್ತಿಗೂ ಕರ್ನಾಟಕದ ಪರ ನಾನಿದ್ದೇನೆ ಅಂತ ಹೇಳಲಿ, ಆ ಬಗ್ಗೆ ನಾನು ತುಟಿಕ್ ಪುಟಿಕ್ ಎನ್ನಲ್ಲ ಎಂದಿದ್ದರು. ಹಾಗಾಗಿ ಈ ಹೇಳಿಕೆಯ ಬೆನ್ನಲ್ಲೇ ರವಿ ಗಣಿಗ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
