ಬೆಂಗಳೂರು :
ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ‘ಕಪ್’ಚುಕ್ಕೆ. ಜೂನ್ 4, 2025 ರಂದು ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ಈ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಹಾಯಹಸ್ತ ಚಾಚಿದೆ.
ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಪ್ರತಿ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಆರ್ಥಿಕ ಸಹಾಯ ನೀಡಿರುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ. ಈ ನೆರವಿನೊಂದಿಗೆ ಆರ್ಸಿಬಿ ಹೊಸ ಅಧ್ಯಾಯವನ್ನು ಸಹ ಶುರು ಮಾಡಿದೆ.
ಅಭಿಮಾನಿಗಳ ಸಾವಿನ ಬೆನ್ನಲ್ಲೇ ಆರ್ಸಿಬಿ ಕೇರ್ಸ್ ಶುರು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ನೀಡಿದೆ. ಅಲ್ಲದೆ ಆರ್ಸಿಬಿ ಕೇರ್ಸ್ ಮೂಲಕ ಮತ್ತಷ್ಟು ಸಹಾಯಹಸ್ತ ನೀಡುವ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆಯನ್ನು ಸಹ ನೀಡಿದ್ದಾರೆ . ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್ಸಿಬಿ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ, ಕರುಣೆ, ಒಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆಯಾಗಿದೆ.
ಆರ್ಸಿಬಿ ಕೇರ್ಸ್ ಕುರಿತು ಇನ್ನಷ್ಟು ವಿವರಗಳು ಶೀಘ್ರದಲ್ಲೇ… ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದೀಗ ಅಭಿಮಾನಿಗಳ ಮೇಲಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಕಾಳಜಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಆರ್ಸಿಬಿ ಕೇರ್ಸ್ನ ನಡೆಯನ್ನು ಸ್ವಾಗತಿಸಿದ್ದಾರೆ.








