ಬೆಂಗಳೂರು:
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಇಂದು ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿದ್ದು, ರಣರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಹಿಂದೆ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಆರ್‌ಸಿಬಿಗೆ ಕಪ್ ಗೆಲ್ಲುವ ಭಾಗ್ಯ ಒಲಿದಿರಲಿಲ್ಲ.
ಈ ಬಾರಿ ತಂಡದ ಚೊಚ್ಚಲ ಗೆಲುವಿಗಾಗಿ ಅಭಿಮಾನಿಗಳು ರಾಜ್ಯಾದ್ಯಂತ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ RCB ಜೆರ್ಸಿಗೆ ಸ್ನಾನ ಮಾಡಿಸಿದ್ದರು. ತಂಡದ ಸಕಲ ಕಷ್ಟಗಳು ಕಳೆದು ಈ ಸಲ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂದು ಫ್ರಾರ್ಥಿಸಿದ್ದರು. ಇದೀಗ ಆಸೆ ಮತ್ತು ಕನಸಿನಂತೆ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಕಪ್ ಗೆಲ್ಲುದೊಂದೆ ಬಾಕಿ.
ಮಂಗಳವಾರ ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ಕೆಲವು ಆರ್‌ಸಿಬಿ ಅಭಿಮಾನಿಗಳು ದೇವಸ್ಥಾನಕ್ಕೆ ತೆರಳಿ ಆರ್‌ಸಿಬಿ ಜೆರ್ಸಿಗೆ ವಿಶೇಷ ಪೂಜೆ ಮಾಡಿದ್ದಾರೆ.ಆರ್‌ಸಿಬಿಯ ಅಭಿಮಾನಿಗಳು ತಂಡ ಗೆದ್ದರೆ ಮೈದಾನಗಳು ಹಾಗೂ ಮಾಲ್‌ಗಳಲ್ಲಿ ವಿಜಯೋತ್ಸವ ಆಚರಣೆ, ರಸ್ತೆಗಳಲ್ಲಿ ಬೈಕ್, ಕಾರುಗಳಲ್ಲಿ ಮೆರವಣಿ ಮಾಡುವ ಸಾಧ್ಯತೆಯಿದೆ. ಹೀಗಾಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಜತೆಗೆ ನಗರದ ಯಾವುದೇ ರಸ್ತೆಗಳಲ್ಲಿ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








