ಬೆಂಗಳೂರು
ಭಾರೀ ವಿವಾದಕ್ಕೆ ಗುರಿಯಾಗಿರುವ ಕಾಂತರಾಜು ಆಯೋಗ ಜಾತಿಗಣತಿ ವರದಿಗೆ ಬ್ರೇಕ್ ಹಾಕಲು ಹೈಕಮಾಂಡ್ ಸೂಚಿಸಿದ್ದು, ಬದಲಿಗೆ ಮರು ಜಾತಿಗಣತಿ ಮಾಡುವಂತೆ ಸೂಚಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ ಇಂದು (ಜುಲೈ 23) ಸಂಬಂಧ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ಮಾಡಿದ್ದು, ಜಾತಿ ಜನಗಣತಿ ಮರು ಸಮೀಕ್ಷೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಸುವ ನಿರ್ಧರಿಸಲಾಗಿದ್ದು, ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.
ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಾಳೆ (ಜುಲೈ 24) ಅಧಿಸೂಚನೆ ಹೊರಡಿಸಲಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಹೊಸ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆ ಮಾದರಿ, ರೂಪರೇಷೆ, ಕಾಲಾವಧಿ ಬಗ್ಗೆ ನಾಳೆ ಪ್ರಕಟವಾಗಿದೆ.ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮದುಸೂದನ್ ನಾಯಕ್ ಅವರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ ಮರು ಜಾತಿಗಣತಿಯಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಪಕ್ಷಗಳ ಟೀಕೆ ಬೆನ್ನಲ್ಲೇ ಸಿದ್ದರಾಮಯ್ಯ, ವೈಜ್ಞಾನಿಕವಾಗಿ ಜಾತಿಗಣತಿ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಮಠಾಧೀಶರು, ಪ್ರಬಲ ಸಮುದಾಯಗಳ ವಿರೋಧ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮರು ಜಾತಿ ಗಣತಿ ವರದಿ ಮಅಡುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಈಗ ಸಿದ್ದರಾಮಯ್ಯ ಮರು ಜಾತಿ ಗಣತಿಗೆ ಚಾಲನೆ ಕೊಟ್ಟಿದ್ದು, ವೈಜ್ಞಾನಿಕವಾಗಿ ಜಾತಿಗಣತಿ ಮಾಡುವಂತೆ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮಾನವ ಸಂಪನ್ಮೂಲ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಕೆ ಸೂಚನೆ ನೀಡಿರುವ ಸಿಎಂ, ಲೋಪದೋಷ ಆಗದಂತೆ ಈ ಬಗ್ಗೆ ಕ್ರಮ ವಹಿಸಲು ತಿಳಿಸಿದ್ದಾರೆ.
ತರಬೇತಿ ಸೇರಿದಂತೆ ಸಮೀಕ್ಷೆಗೆ ಪೂರ್ವಭಾವಿ ಸಿದ್ಧತೆಗಳನ್ನು ಈಗಲೇ ಆರಂಭಿಸಬೇಕು. ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಅಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು ಸಿದ್ದರಾಮಯ್ಯ, ಅಧಿಕಾರಿಗಳಿಗೆ ಸೂಚನೆಗಳನ್ನ ನೀಡಿದ್ದಾರೆ.
ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನು ಇದೆಯೇ ಇಲ್ಲವೇ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಯಬೇಕು. ಈ ಸಮೀಕ್ಷೆ ವರದಿ ಬಜೆಟ್ ಸಿದ್ಧಪಡಿಸುವ ವೇಳೆ ಆಧಾರವಾಗಲಿದೆ. ಈ ಬಾರಿಯ ಸಮೀಕ್ಷೆ ದೇಶದಲ್ಲೇ ಮಾದರಿ ಸಮೀಕ್ಷೆಯಾಗಬೇಕು ಎಂದು ಹೇಳಿದರು.
