ನವದೆಹಲಿ :
ದೇಶದಲ್ಲಿ ಸುರಕ್ಷತೆಯಲ್ಲಿ ಸುಪ್ರಿಂ ಆಗಿರುವ ಟಾಟಾ ಕಂಪನಿ ಜನಮನ್ನಣೆ ಗಳಿಸಿದೆ. ಅದರಲ್ಲೂ ಕಂಪನಿಯ ಕಾರುಗಳನ್ನು ಪ್ರತಿಯೊಬ್ಬರು ತಮ್ಮ ಕನಸಿನ ವಾಹನಗಳಾಗಿ ಖರೀದಿಸುತ್ತಾರೆ. ಇದೀಗ, ಪ್ಯಾಸೆಂಜರ್ ವೆಹಿಕಲ್ ಬೆಲೆಯಲ್ಲಿ ಹೆಚ್ಚಿಸುವುದಾಗಿ ಕಂಪನಿ ಘೋಷಣೆ ಮಾಡಿದ್ದು, ಅದರ ಗ್ರಾಹಕರಿಗೆ ಬೇಸರ ತರಿಸಿದೆ.
ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ತನ್ನೆಲ್ಲ ಪ್ರಯಾಣಿಕ ವಾಹನ ಮಾದರಿ ಬೆಲೆಯನ್ನು ಶೇಕಡ 0.6% ಏರಿಸುವುದಾಗಿ ಹೇಳಿದೆ. ನೂತನ ದರಗಳು ಜುಲೈ 17 ರಿಂದ ಅನ್ವಯವಾಗಲಿದೆ. ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಈ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಆದರೆ, ದರ ಏರಿಕೆಯು ಕೊಂಚವೇ ಆಗಿದ್ದು, ಗ್ರಾಹಕರಿಗೆ ನೆಮ್ಮದಿ ತಂದಿದೆ.
ಜುಲೈ 16ರೊಳಗೆ ಟಾಟಾ ಕಾರುಗಳನ್ನು ಬುಕ್ಕಿಂಗ್ ಮಾಡುವ ಗ್ರಾಹಕರು ಹಾಗೂ ಈಗಾಗಲೇ ಆರ್ಡರ್ ಮಾಡಿ, ಜುಲೈ 31ರೊಳಗೆ ವಿತರಣೆ ಪಡೆದುಕೊಳ್ಳಲು ಕಾಯುತ್ತಿರುವ ಖರೀದಿದಾರರಿಗೆ ಯಾವುದೇ ರೀತಿಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟುವುದಿಲ್ಲ. ಟಾಟಾ, ಭಾರತದ ಮಾರುಕಟ್ಟೆಯಲ್ಲಿ ಪಂಚ್, ನೆಕ್ಸಾನ್ ಮತ್ತು ಟಿಯಾಗೊ ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ.
ಮೊದಲಿಗೆ ಟಾಟಾ ಕಂಪನಿ ಅತಿಹೆಚ್ಚು ಮಾರಾಟ ಮಾಡುವ ನೆಕ್ಸಾನ್ ಎಸ್‌ಯುವಿ ಬಗ್ಗೆ ಮಾತನಾಡೋಣ. ಈ ಕಾರು, ಇಂಧನ ಹಾಗೂ ಎಲೆಕ್ಟ್ರಿಕ್ ಪವರ್ ಟ್ರೈನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಸದ್ಯ, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ನೊಂದಿಗೆ ದೊರೆಯುವ ‘ನೆಕ್ಸಾನ್’ ರೂ.7.80 – 14.50 ಲಕ್ಷ ಬೆಲೆಯಲ್ಲಿ ಸಿಗಲಿದ್ದು, 24.07 kmpl ಮೈಲೇಜ್ ನೀಡುತ್ತದೆ.
ನೆಕ್ಸಾನ್ ಎಲೆಕ್ಟ್ರಿಕ್ ಕಾರು, ರೂಪಾಂತರಗಳಿಗೆ ಅನುಗುಣವಾಗಿ ರೂ.14.49 ದಿಂದ ರೂ.19.54 ಲಕ್ಷ ಬೆಲೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ಯಿಂದ 453 km ರೇಂಜ್ ನೀಡುತ್ತದೆ. ಕಂಪನಿಯು ದೊಡ್ಡ ಪ್ರಮಾಣದಲ್ಲಿ ಸೇಲ್ ಮಾಡುವ ಕಾರುಗಳಲ್ಲಿ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಪ್ರಮುಖವಾಗಿದ್ದು, ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, ರೂ.6 ರಿಂದ ರೂ.9.52 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಟಾಟಾ ಕಂಪನಿ ಎಂಟ್ರಿ ಲೆವೆಲ್ ಕಾರುಗಳಲ್ಲಿ ಟಿಯಾಗೊ ಒಂದಾಗಿದೆ. ಇದು, ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಪವರ್ ಟ್ರೈನ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟೋಲ್ ಹಾಗೂ CNG ಎಂಜಿನ್ ನೊಂದಿಗೆ ಸಿಗುವ ಟಿಯಾಗೊ ರೂ.5.60 – ರೂ.8.11 ಲಕ್ಷ ಬೆಲೆಯನ್ನು ಹೊಂದಿದ್ದು, 19 ರಿಂದ 26.49 kmpl ಮೈಲೇಜ್ ನೀಡುತ್ತದೆ.
ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಕಾರುಗಳಲ್ಲಿ ಟಿಯಾಗೊ ಇವಿಯು ಪ್ರಮುಖವಾಗಿದೆ. ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ ಸಂಪೂರ್ಣ ಚಾರ್ಜಿನಲ್ಲಿ 250 km ಯಿಂದ 315 km ರೇಂಜ್ ನೀಡುತ್ತದೆ. ಇನ್ನುಳಿದಂತೆ ಟಾಟಾ, ಟಿಗೂರ್, ಆಲ್ಟ್ರಾಜ್, ಸಫಾರಿ ಹಾಗೂ ಹ್ಯಾರಿಯರ್ ನಂತಹ ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತದೆ.
ಇತ್ತೀಚಿಗಷ್ಟೇ ಮೊದಲ ತ್ರೈಮಾಸಿಕದ ಮಾರಾಟ ವರದಿಯನ್ನು ಟಾಟಾ ಕಂಪನಿ ಪ್ರಕಟಿಸಿದ್ದು, ಒಟ್ಟು 2,26,245 ಯುನಿಟ್ ಸೇಲ್ ಮಾಡಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ (2,31,248 ಯುನಿಟ್) ಅಲ್ಪ ಪ್ರಮಾಣದಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೆ, ಜೂನ್ ತಿಂಗಳಲ್ಲಿ ದೇಶೀಯ ಪ್ರಯಾಣಿಕ ವಾಹನ ಸೇಲ್ ನಲ್ಲಿ 47,235 ಯುನಿಟ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 5% ಪ್ರಗತಿ ಸಾಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ