ಆಸ್ತಿ ಕೊ‍ಳ್ಳುವ ಮುನ್ನ ಒಮ್ಮೆ ಓದಿ …!

ತುಮಕೂರು

     ಪ್ರಾಪರ್ಟಿ ಖರೀದಿ ಮಾಡುವಾಗ, ಅದರಲ್ಲೂ ಮನೆ ಖರೀದಿ ಮಾಡುವಾಗಲಂತೂ ಹಲವು ಸಂಗತಿಗಳನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು. ಈ ಪೈಕಿ ಅತ್ಯಂತ ಮಹತ್ವದ ಸಂಗತಿಯೆಂದರೆ, ಪ್ರಾಪರ್ಟಿಯ ಮಾಲೀಕತ್ವ ಯಾವ ರೀತಿಯದ್ದು ಎಂಬುದನ್ನು ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಪ್ರಾಪರ್ಟಿಯಲ್ಲಿ ಫ್ರೀ ಹೋಲ್ಡ್‌ ಮತ್ತು ಲೀಸ್‌ ಹೋಲ್ಡ್‌ ಎಂಬ ಎರಡು ವಿಧದ ಮಾಲೀಕತ್ವವಿರುತ್ತದೆ. ಇದನ್ನು ಸರಳವಾಗಿ ಕ್ರಯ ಮತ್ತು ಭೋಗ್ಯ ಎಂದು ಕರೆಯಲಾಗುತ್ತದೆ.

    ಫ್ರೀಹೋಲ್ಡ್‌ ಎಂದರೆ ಕ್ರಯ ಸ್ವತ್ತಾಗಿದ್ದರೆ, ಮಾಲೀಕತ್ವದ ಹಕ್ಕುಗಳು ಖರೀದಿದಾರರಾದ ನಿಮ್ಮ ಕೈಯಲ್ಲೇ ಇರುತ್ತದೆ. ನಿಮ್ಮ ನಂತರ ನಿಮ್ಮ ಉತ್ತರಾಧಿಕಾರಿಗಳಿಗೆ ಈ ಹಕ್ಕು ವರ್ಗಾವಣೆಯಾಗುತ್ತದೆ. ಈ ಪ್ರಾಪರ್ಟಿಯನ್ನು ಮಾರಾಟ ಮಾಡುವವರೆಗೂ, ನೀವು ಮತ್ತು ನಿಮ್ಮ ಕುಟುಂಬದವನ್ನು ಇದನ್ನು ಬಳಸಬಹುದು, ಇದರಲ್ಲಿ ಕಟ್ಟಡ ನಿರ್ಮಾಣ ಮಾಡಬಹುದು ಮತ್ತು ಮಾರಾಟವನ್ನು ಬೇಕಾದರೂ ಮಾಡಬಹುದು. ಇದರಲ್ಲಿ ಭೂಮಿ ಮತ್ತು ಅದರ ಮೇಲೆ ನಿರ್ಮಾಣ ಮಾಡಿದ ಎಲ್ಲವೂ ನಿಮ್ಮ ಸ್ವತ್ತಾಗಿರುತ್ತದೆ. ನಮ್ಮ ದೇಶದ ಬಹುತೇಕ ಆಸ್ತಿಗಳು ಕ್ರಯ ಆಸ್ತಿಗಳೇ ಆಗಿರುತ್ತವೆ. ಇನ್ನು ಸರಳವಾಗಿ ಹೇಳಬೇಕು ಎಂದರೆ ಈ ಆಸ್ತಿಯ ಸಂಪೂರ್ಣ ಹಕ್ಕು ನಿಮ್ಮದೆ ಆಗಿರುತ್ತದೆ.

   ಇನ್ನು ಲೀಸ್‌ಹೋಲ್ಡ್‌ ಪ್ರಾಪರ್ಟಿ ಅಥವಾ ಭೋಗ್ಯದ ಸ್ವತ್ತು ಒಂದು ನಿರ್ದಿಷ್ಟ ಅವಧಿಗೆ ಮಾಲೀಕತ್ವವನ್ನು ನೀಡುತ್ತದೆ. ಸಾಮಾನ್ಯವಾಗಿ ಈ ರೀತಿಯ ಭೋಗ್ಯವನ್ನು ಸರ್ಕಾರ ಅಥವಾ ಸರ್ಕಾರದ ಏಜೆನ್ಸಿ ಸಹ ನೀಡುತ್ತಿರುತ್ತದೆ. ಲೀಸ್ ಅವಧಿ ಮುಗಿದ ಮೇಲೆ ಮಾಲೀಕತ್ವದ ಹಕ್ಕುಗಳು ಸರ್ಕಾರಕ್ಕೆ ವರ್ಗಾವಣೆಯಾಗುತ್ತವೆ. ಇಂತಹ ಸ್ವತ್ತುಗಳ ಭೋಗ್ಯದ ಅವಧಿ ಸಾಮಾನ್ಯವಾಗಿ 30 ವರ್ಷಗಳಿಂದ 99 ವರ್ಷಗಳವರೆಗೆ ಇರಬಹುದು. ಈ ಅವಧಿ ಮುಗಿದ ನಂತರ, ಭೋಗ್ಯವನ್ನು ಮುಂದುವರಿಸಬಹುದು ಅಥವಾ ಅದನ್ನು ಫ್ರೀಹೋಲ್ಡ್ ಆಗಿ ಪರಿವರ್ತನೆ ಮಾಡಬಹುದು.

    ಫ್ರೀಹೋಲ್ಡ್‌ ಮತ್ತು ಲೀಸ್‌ಹೋಲ್ಡ್‌ ಪ್ರಾಪರ್ಟಿಗಳಿಗೆ ಅನುಕೂಲ ಮತ್ತು ಅನಾನುಕೂಲಗಳೆರಡೂ ಇವೆ. ಫ್ರೀಹೋಲ್ಡ್‌ ಪ್ರಾಪರ್ಟಿಗಳಲ್ಲಿ ಮಾಲೀಕರಿಗೆ ಮಾಲೀಕತ್ವದ ಎಲ್ಲ ಹಕ್ಕುಗಳೂ ಇರುತ್ತವೆ. ಯಾವುದೇ ಮಿತಿ ಇಲ್ಲದೇ ಮಾರಾಟ ಮಾಡಬಹುದು ಅಥವಾ ಜಾಗದ ರೂಪವನ್ನು ಬದಲಿಸಬಹುದು. ಆದರೆ, ಲೀಸ್‌ಹೋಲ್ಡ್‌ ಆಗಿದ್ದರೆ, ಮಾಲೀಕರಿಗೆ ಭೋಗ್ಯದ ಅವಧಿಯವರೆಗೆ ಮಾತ್ರ ಮಾಲೀಕತ್ವ ಇರುತ್ತದೆ. ಆಸ್ತಿಯಲ್ಲಿ ಯಾವುದೇ ಬದಲಾವಣೆ ಮಾಡಲು ಅಥವಾ ಮಾರಾಟ ಮಾಡಲು ಈ ಮಾಲೀಕರಿಗೆ ಎನ್‌ಒಸಿ ಬೇಕಾಗಬಹುದು. ಅಲ್ಲದೆ, ವರ್ಗಾವಣೆ ಮಾಡುವುದಕ್ಕೆ ಶುಲ್ಕ ನೀಡಬೇಕಾಗುತ್ತದೆ.

    ಕೆಲವು ಪ್ರಕರಣಗಳಲ್ಲಿ, ಲೀಸ್‌ಹೋಲ್ಡ್‌ ಪ್ರಾಪರ್ಟಿಗಳಿಗೆ ಹೋಲಿಸಿದರೆ ಮನೆ ಸಾಲದ ಬಡ್ಡಿ ದರವು ಫ್ರೀಹೋಲ್ಡ್‌ ಪ್ರಾಪರ್ಟಿಗಳಿಗೆ ಕಡಿಮೆ ಇರಬಹುದು. ಬ್ಯಾಂಕ್‌ಗಳು ಸಾಮಾನ್ಯವಾಗಿ ಫ್ರೀಹೋಲ್ಡ್‌ ಪ್ರಾಪರ್ಟಿಗಳನ್ನು ಕಡಿಮೆ ರಿಸ್ಕ್ ಇರುವ ಪ್ರಾಪರ್ಟಿ ಎಂದು ಪರಿಗಣಿಸುತ್ತವೆ. ಯಾಕೆಂದರೆ, ಇದರಲ್ಲಿ ಖರೀದಿದಾರರಿಗೆ ಸಂಪೂರ್ಣ ಮಾಲೀಕತ್ವ ಹಕ್ಕುಗಳು ಇರುತ್ತವೆ. ಇದರ ಜೊತೆಗೆ, ಫ್ರೀಹೋಲ್ಡ್‌ ಪ್ರಾಪರ್ಟಿಗಳಿಗೆ ಅಧಿಕ ಸಾಲ ಮೊತ್ತವನ್ನು ಪಡೆಯಲೂ ಸಾಧ್ಯವಾಗುತ್ತದೆ.

    ಫ್ರೀಹೋಲ್ಡ್‌ ಪ್ರಾಪರ್ಟಿಗಳಿಗೆ ಹೋಲಿಸಿದರೆ ಲೀಸ್‌ಹೋಲ್ಡ್‌ ಪ್ರಾಪರ್ಟಿಗಳು ಕಡಿಮೆ ದರದಲ್ಲಿ ಸಿಗುತ್ತವೆ. ಯಾಕೆಂದರೆ, ಲೀಸ್‌ಹೋಲ್ಡ್‌ನಲ್ಲಿ ನೀವು ಕಾಯಂ ಆಗಿ ಪ್ರಾಪರ್ಟಿ ಖರೀದಿ ಮಾಡುವುದಿಲ್ಲ. ಬದಲಿಗೆ, ನಿರ್ದಿಷ್ಟ ಅವಧಿಗೆ ಮಾತ್ರ ಆಸ್ತಿಯನ್ನು ಇಟ್ಟುಕೊಂಡಿರುತ್ತೀರಿ.

    ಫ್ರೀಹೋಲ್ಡ್‌ ಪ್ರಾಪರ್ಟಿಯ ರೀಸೇಲ್ ಮೌಲ್ಯ ಕೂಡಾ ಚೆನ್ನಾಗಿರುತ್ತದೆ. ತಲೆಮಾರುಗಳವರೆಗೂ ನಿಮ್ಮ ಕುಟುಂಬಕ್ಕೆ ಒಂದು ಆಸ್ತಿ ಇರಬೇಕು ಎಂದು ನೀವು ಬಯಸಿದರೆ, ಸ್ವಲ್ಪ ತುಟ್ಟಿಯಾದರೂ ಸರಿ, ನೀವು ಫ್ರೀಹೋಲ್ಡ್‌ ಪ್ರಾಪರ್ಟಿ ಖರೀದಿ ಮಾಡಬೇಕು. ಯಾವ ಪ್ರಾಪರ್ಟಿಯನ್ನು ಖರೀದಿ ಮಾಡಬೇಕು ಎಂದು ನಿರ್ಧಾರ ಮಾಡುವುದಕ್ಕೂ ಮೊದಲು, ನಿಮ್ಮ ಬಜೆಟ್‌, ಪ್ರಾಪರ್ಟಿಯ ಸ್ಥಳ, ಸಾರ್ವಜನಿಕ ಸಾರಿಗೆ ಸೌಲಭ್ಯ ಮತ್ತು ಇತರ ಮೂಲಭೂತ ಅಂಶಗಳನ್ನು ಪರಿಗಣಿಸಿಕೊಳ್ಳಬೇಕು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap