ಬಾಗಲಕೋಟೆ :
ಸಂಯುಕ್ತಾ ಪಾಟೀಲ್‌ಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ಸಿಕ್ಕ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ನಿರಾಕರಿಸಿದ್ದಕ್ಕೆ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಅವರು, ನಾನು ಮಹಿಳೆ ಆಗಿದ್ದಕ್ಕೆ ನನಗೆ ಅನ್ಯಾಯ ಆಗುತ್ತಿದೆ.
ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಜಾರಿಗೆ ಮಾಡಿ, ಮಹಿಳೆಗೆ ಅನ್ಯಾಯ ಮಾಡುತ್ತಿದ್ದಾರೆ. ಹಿಂದಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಾದಾಮಿ ಮತಕ್ಷೇತ್ರದಲ್ಲಿ ಡಾ.ದೇವರಾಜ ಪಾಟೀಲ ಹೆಸರು ಬಂತು, ಆಗ ತೀವ್ರ ವಿರೋಧ ಆದ ಬಳಿಕ, ಮತ್ತೆ ಚಿಮ್ಮನಕಟ್ಟಿ ಅವರಿಗೆ ನೀಡಲಾಯಿತು. ನಮ್ಮ ಕ್ಷೇತ್ರದಲ್ಲೇ ಬದಲಾವಣೆ ಆಗಿದೆ. ಅವರಿಗೆ ಒಂದು ನ್ಯಾಯ, ನಮಗೊಂದು ನ್ಯಾಯ ಏಕೆ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಬದಲಾವಣೆ ಆಗುವ ವಿಶ್ವಾಸ ಇದೆ, ಇಲ್ಲವಾದಲ್ಲಿ ಈಗಿರುವ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸೇರಿ ಇತರೆ ಹುದ್ದೆಗಳಿಗೆ ರಾಜೀನಾಮೆ ನೀಡಿ, ಅಭಿಮಾನಿಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದೇ ರೀತಿ ಹೋಗುತ್ತೇನೆ. ಮಾರ್ಚ 28ರ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಚುನಾವಣೆ ಅಖಾಡದಲ್ಲಿ ಇರುವುದು ಖಚಿತ. ನನ್ನ ಪತಿ ಕಾಂಗ್ರೆಸ್ ಶಾಸಕರಾಗಿದ್ದರು ಕೂಡ ಅವರನ್ನು ಹೊರಗಿಟ್ಟು ಚುನಾವಣೆ ಮಾಡುವ ಶಕ್ತಿ ನನಗಿದೆ ಎಂದು ಹೇಳಿದರು.