ದಾಖಲೆ ಮತದಾನವಾದ ಜಿಲ್ಲೆ ಯಾವುದು ಗೊತ್ತಾ….?

ಬಳ್ಳಾರಿ

    ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ರಾಜ್ಯದಲ್ಲಿ ಮತದಾನ ನಡೆದಿದೆ. ಜೂನ್ 4ರಂದು ಮತಎಣಿಕೆ ನಡೆಯಲಿದೆ.

    ಬಳ್ಳಾರಿ ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಶಾಂತಿಯುತವಾಗಿ ಮತದಾನ ನಡೆದಿದೆ. ಅಂತಿಮ ವರದಿಯಂತೆ ಒಟ್ಟು ಶೇ.73.59ರಷ್ಟು ಮತದಾನವಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 1952ರಿಂದ ಇದುವರೆಗೂ ನಡೆದ ಲೋಕಸಭೆ ಚುನಾವಣೆಗಳಲ್ಲಿ ಇದು ದಾಖಲೆಯ ಮತದಾನ ಪ್ರಮಾಣವಾಗಿದೆ ಎಂದು ಹೇಳಿದ್ದಾರೆ.

     ಬಳ್ಳಾರಿ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮತಯಂತ್ರಗಳನ್ನು ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಟ್ಟಡದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸ್ಟ್ರಾಂಗ್ ರೂಂಗಳಲ್ಲಿ ಇರಿಸಿ, ಕಟ್ಟಡಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.

    ಬುಧವಾರ ಕಾಲೇಜು ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಚುನಾವಣಾ ಸಾಮಾನ್ಯ ವೀಕ್ಷಕರು, ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳ ಸ್ಟ್ರಾಂಗ್ ರೂಂ ಬಾಗಿಲಿಗೆ ಬೀಗ ಹಾಕಿ, ಮೊಹರು ಹಾಕಲಾಯಿತು, ಜೊತೆಗೆ ಬಾಗಿಲನ್ನು ದಪ್ಪ ಹಲಗೆಯ ಮೂಲಕ ಸಂಪೂರ್ಣ ಮುಚ್ಚಿ, ಸೀಲ್ ಮಾಡಲಾಯಿತು.

    ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, “ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ಸುಗಮ, ಶಾಂತಿಯುತವಾಗಿ ನಡೆದಿದೆ. ಈ ಬಾರಿ ಶೇ. 73.92ರಷ್ಟು ಮತದಾನವಾಗಿದ್ದು, ಕ್ಷೇತ್ರ ವ್ಯಾಪ್ತಿಯ ಕಂಪ್ಲಿ, ಬಳ್ಳಾರಿ, ಬಳ್ಳಾರಿ ನಗರ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾದ ಇವಿಎಂ, ವಿವಿ ಪ್ಯಾಟ್ ಮತಯಂತ್ರಗಳನ್ನು ಕಾಲೇಜು ಕಟ್ಟಡದಲ್ಲಿ ಡಿಮಸ್ಟರಿಂಗ್ ಮಾಡಿಕೊಳ್ಳಲಾಗಿದೆ” ಎಂದರು.

   “ಮತಯಂತ್ರಗಳನ್ನು ಇಡಲು ಕಾಲೇಜು ಕಟ್ಟಡದಲ್ಲಿ ವಿಶೇಷ ವ್ಯವಸ್ಥೆ ಮಾಡಿ ನೆಲಮಹಡಿ, ಮೊದಲ ಮಹಡಿ ಹಾಗೂ ಮೂರನೇ ಮಹಡಿಗಳಲ್ಲಿ ಸ್ಟ್ರಾಂಗ್ ರೂಂಗಳನ್ನು ನಿರ್ಮಿಸಿ, ಜೋಡಿಸಿಡಲಾಗಿದೆ. ಸ್ಟ್ರಾಂಗ್ ರೂಂಗಳನ್ನು ಚುನಾವಣೆಯ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ ಅಲ್ಲದೆ ಅಭ್ಯರ್ಥಿಗಳು ಹಾಗೂ ಅವರ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ಸೀಲಿಂಗ್ ಮಾಡಲಾಗಿದೆ” ಎಂದರು.

    ” ಕಟ್ಟಡದಲ್ಲಿ ಮತಯಂತ್ರಗಳನ್ನು ಇರಿಸಲು ಒಟ್ಟು 20 ಸ್ಟ್ರಾಂಗ್ ರೂಂ ಗಳು, ಪೋಸ್ಟಲ್ ಬ್ಯಾಲೆಟ್‍ಗಳನ್ನು ಇರಿಸಲು 2 ಸ್ಟ್ರಾಂಗ್ ರೂಂ ಗಳನ್ನು ಮಾಡಲಾಗಿದೆ. ಜೂನ್ 4ರಂದು ಮತಗಳ ಎಣಿಕೆ ಇದೇ ಕಾಲೇಜು ಕಟ್ಟಡದಲ್ಲಿ ನಡೆಯಲಿದೆ. 8 ಮತ ಎಣಿಕಾ ಕೊಠಡಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಎಣಿಕಾ ಕೊಠಡಿಯಲ್ಲಿ 14 ಟೇಬಲ್‍ಗಳನ್ನು ಹಾಕಲಾಗುತ್ತಿದ್ದು, ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಮತ ಎಣಿಕೆ ಸುತ್ತುಗಳು ನಿರ್ಧಾರವಾಗಲಿದೆ” ಎಂದು ವಿವರಣೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, “ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ. ಮತ ಎಣಿಕಾ ಕೇಂದ್ರ ಕಟ್ಟಡಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಿಆರ್‌ಪಿಎಫ್, ಕೆಎಸ್‍ಆರ್‌ಪಿ, ಸಿವಿಲ್ ಪೊಲೀಸ್, ಡಿವೈಎಸ್‍ಪಿ, ಇನ್ಸ್‌ಪೆಕ್ಟರ್‌ಗಳ ಹಂತಗಳ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದರು.

    ಅಧಿಕಾರಿ, ಸಿಬ್ಬಂದಿಯು ದಿನದ 24 ಗಂಟೆ ಕಟ್ಟಡಕ್ಕೆ ಬಿಗಿ ಭದ್ರತೆ ನೀಡಲಿದ್ದು, ಶಿಫ್ಟ್ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ಜೂನ್ 4ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ನಡೆಯಲಿದೆ.

    ಬಳ್ಳಾರಿಯ ಚುನಾವಣೆ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಹಾಲಿ ಸಂಸದ ವೈ. ದೇವೇಂದ್ರಪ್ಪ ಬಿಟ್ಟು, ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಈ ಬಾರಿ ಗೆಲ್ಲಲೇಬೇಕು ಎಂದು ಸಂಡೂರು ಕ್ಷೇತ್ರದ ಹಾಲಿ ಶಾಸಕ ಈ. ತುಕಾರಾಮ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.

 

Recent Articles

spot_img

Related Stories

Share via
Copy link
Powered by Social Snap