ತುಮಕೂರು:
ಸೊಪ್ಪು, ತರಕಾರಿ, ಹಣ್ಣುಗಳೂ ದುಬಾರಿ : ಕುಗ್ಗಿಹೋದ ಗ್ರಾಹಕನ ಕೊಳ್ಳುವ ಶಕ್ತಿ
ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಡದೆ ಬರುತ್ತಿರುವ ಮಳೆಯ ಕಾರಣದಿಂದ ಈಗಾಗಲೇ ದುಬಾರಿಯಾಗಿದ್ದ ಸೊಪ್ಪು, ತರಕಾರಿ, ಹಣ್ಣುಗಳ ಬೆಲೆಗಳು ಮತ್ತಷ್ಟು ಏರಿಕೆಯಾಗಿ ದರಗಳು ಗಗನ ಮುಟ್ಟಿವೆ. ದಾಖಲೆಯ ಬೆಲೆ ಏರಿಕೆಯಿಂದಾಗಿ ಟೊಮೆಟೊ ಕೆಂಪು ಬಂಗಾರದಂತಾಗಿದ್ದು, ಅಡುಗೆಗೆ ವನಿತೆಯರು ಟೊಮೆಟೊ ಬಳಸದೆ ಹುಣಸೆಹುಳಿ ಹಿಂಡುತ್ತಿದ್ದಾರೆ. ಸೊಪ್ಪು, ತರಕಾರಿ, ಹಣ್ಣುಗಳ ಬೆಲೆಗಳೆಲ್ಲಾ ಏರಿದ್ದು ಗ್ರಾಹಕನ ಕೊಳ್ಳುವ ಶಕ್ತಿಯನ್ನು ಮತ್ತಷ್ಟು ಕ್ಷೀಣಿಸಿವೆ. ಕೋಳಿ ಮಾಂಸ, ಮೊಟ್ಟೆ, ಮೀನಿನ ದರ ಕೊಂಚ ಕಡಿಮೆಯಾಗಿದ್ದು, ಖಾದ್ಯ ತೈಲದ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಇನ್ನೂ ಕೆಲ ದವಸ-ಧಾನ್ಯಗಳ ಬೆಲೆಗಳು ಕೊಂಚ ಏರಿಕೆ, ಇಳಿಕೆ ಕಂಡಿವೆ.
ಕೈಗೆಟುಕದ ಸೊಪ್ಪು, ತರಕಾರಿ :
ನಿರಂತರ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಂದ ಈಗಾಗಲೇ ದೂರವಾಗಿದ್ದ ಸೊಪ್ಪು-ತರಕಾರಿಗಳು ಈ ವಾರ ಮತ್ತಷ್ಟು ಬೆಲೆ ಏರಿ ಗ್ರಾಹಕನಿಗೆ ಬರೆ ಎಳೆದಿವೆ. ಕಳೆದ ವಾರ ಕೆಜಿ 200 ರೂ. ನಂತೆ ಮಾರಾಟವಾಗುತ್ತಿದ್ದ ನುಗ್ಗೆಕಾಯಿ ಬೆಲೆ ಈ ವಾರ 50 ರೂ ಇಳಿಕೆಯಾಗಿದ್ದು, 150 ರೂ. ನಂತೆ ಮಾರಾಟವಾಗುತ್ತಿದೆ. 50-60 ರೂ ಇದ್ದ ನವಿಲುಕೋಸು 70-80 ರೂ. ಗೆ ಏರಿಕೆಯಾಗಿದೆ. ಕ್ಯಾಪ್ಸಿಕಂ 100 ರಿಂದ 120 ರೂ.ಗೆ ಏರಿದ್ದರೆ, ಕ್ಯಾರೆಟ್ 100 ರೂ. ನಿಂದ 50 ರೂ.ಗೆ ಇಳಿದಿದೆ. ಕಳೆದ ವಾರ 100 ರೂ.ಗೆ ಮಾರಾಟವಾಗಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರ 40-60 ರೂ.ಗೆ ಇಳಿದಿದೆಯಾದರೂ ಇತರೆ ಸೊಪ್ಪುಗಳಾದ ಸಬ್ಬಕ್ಕಿ 100, ಮೆಂತ್ಯೆ 70-80, ಪಾಲಕ್-60-70 ರೂ.ಗೆ ಏರಿಕೆಯಾಗಿವೆ. ಈರುಳ್ಳಿ 40-45, ಬೀನ್ಸ್ 80-90 ರೂ.ಗೆ ಏರಿದ್ದು, ದಾಖಲೆಯ ಕೆಜಿ 500 ರೂ ದರ ಕಂಡಿದ್ದ ಹಸಿ ಬಟಾಣಿ ಬೆಲೆ ಕೆಜಿ 150-200 ರೂ.ಗೆ ಕುಸಿದಿದೆ.
ಕಲ್ಲಂಗಡಿ, ಕರಬೂಜ ದುಬಾರಿ, ಬಾಳೆಹಣ್ಣು ಅಗ್ಗ :
ಎಲ್ಲೆಡೆ ಮದುವೆಗಳು ನಡೆಯುತ್ತಿರುವುದರಿಂದ ಕಲ್ಲಂಗಡಿ, ಕರಬೂಜ ಹಣ್ಣುಗಳಿಗೆ ಬೇಡಿಕೆ ಹೆಚ್ಚಿ ಈ ನೀರಿನಂಶದ ಹಣ್ಣುಗಳು ದುಬಾರಿಯಾಗಿವೆ. ಕಳೆದ ವಾರ ಕೆಜಿ 40 ರೂ.ಇದ್ದ ಕಲ್ಲಂಗಡಿ ಹಣ್ಣಿನ ಬೆಲೆ ಈ ವಾರ 60 ರೂ.ಗೆ ಜಿಗಿದಿದೆ. ಕೆಜಿ 60 ರೂ.ಇದ್ದ ಕರಬೂಜ ಬೆಲೆ 80 ರೂ.ಗೆ ಏರಿದೆ. ಮದುವೆ, ಇನ್ನಿತರೆ ಸಮಾರಂಭಗಳಲ್ಲಿ ಪಾನೀಯ, ಊಟದ ನಂತರ ಹಣ್ಣುಗಳ ತುಂಡುಗಳನ್ನು ಅತಿಥಿಗಳಿಗೆ ಕೊಡುವುದರಿಂದ ಬೇಡಿಕೆ ಹೆಚ್ಚಿ ಕಲ್ಲಂಗಡಿ, ಕರಬೂಜ ಹಣ್ಣುಗಳ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.
ಸದ್ಯ ಕಿತ್ತಳೆಹಣ್ಣಿನ ಸೀಸನ್ ಇದ್ದು, ಕೆಜಿ 40 ರೂ. ನಂತೆ ಮಾರಾಟವಾಗುತ್ತಿದೆ. 50-60 ರೂ.ಗೆ ದುಬಾರಿಯಾಗಿದ್ದ ಏಲಕ್ಕಿ ಬಾಳೆಹಣ್ಣಿನ ದರ ಈ ವಾರ 40 ರೂ.ಗೆ ಇಳಿದಿದೆ. ಪಚ್ಚೆಬಾಳೆ ಕೆಜಿ 20 ರೂ. ನಂತೆ ಮಾರಾಟವಾಗುತ್ತಿದೆ. ಸೇಬಿನ ಬೆಲೆ ಕೆಜಿಗೆ 20 ರೂ ಹೆಚ್ಚಾಗಿದ್ದು, 120 ರಿಂದ 140 ರೂ.ಗೆ ಏರಿಕೆಯಾಗಿದೆ. ಮಿಕ್ಕಂತೆ ಇತರೆ ಹಣ್ಣುಗಳ ಬೆಲೆಗಳು ಕಳೆದ ವಾರದ ದರದಲ್ಲೆ ಮಾರಾಟವಾಗುತ್ತಿವೆ.
ತೊಗರಿಬೇಳೆ, ಕಡಲೇಬೀಜ ಇಳಿಕೆ :
120 ರೂ. ಇದ್ದ ತೊಗರಿಬೇಳೆ ಬೆಲೆ ಕಳೆದ ವಾರ ಕೆಜಿಗೆ 5 ರೂ.ಇಳಿದಿತ್ತು. ಈ ವಾರ ಮತ್ತೆ ಕೆಜಿಗೆ 10 ರೂ.ಕಡಿಮೆಯಾಗಿ 90-95 ರೂ.ನಂತೆ ಮಾರಾಟವಾಗುತ್ತಿದೆ. 130 ರೂ.ಗೆ ಬೆಲೆ ಹೆಚ್ಚಳ ಕಂಡಿದ್ದ ಕಡಲೇಬೀಜದ ಬೆಲೆ ಈ ವಾರ 15 ರೂ.ನಷ್ಟು ಇಳಿದು, ಚಿತ್ರಾನ್ನದಲ್ಲಿ ಕಡಲೇಬೀಜ ಆಯುವವರ ಸಂತಸಕ್ಕೆ ಕಾರಣವಾಗಿದೆ. ಉದ್ದಿನಬೇಳೆ, ಹೆಸರುಬೇಳೆ ಕೊಂಚ ಏರಿಕೆಯಾಗಿವೆ. ಖಾದ್ಯ ತೈಲದ ಬೆಲೆ ಇಳಿಕೆಯತ್ತ ಸಾಗಿದ್ದು ಸೂರ್ಯಕಾಂತಿ ಎಣ್ಣೆ ಕೆಜಿ 138-140 ರೂ., ಶೇಂಗಾ ಎಣ್ಣೆ 140-145 ರೂ., ತಾಳೆಎಣ್ಣೆ-120-125 ರೂ.ನಂತೆ ಮಾರಾಟವಾಗುತ್ತಿದೆ.
ಇಳಿದ ಕೋಳಿ ಬೆಲೆ, ಮೀನು ಅಗ್ಗ :
ಈ ವಾರ ಕೋಳಿ ಮಾಂಸದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ವಾರ 140 ರೂ. ಇದ್ದ ಬ್ರಾಯ್ಲರ್ ಕೋಳಿ ಕೆ.ಜಿ ರೂ 130 ರೂ.ಗೆ, 120 ರೂ. ಇದ್ದ ಫಾರಮ್ ಕೋಳಿ 110 ರೂ.ಗೆ ಇಳಿದಿದ್ದು ತಲಾ 10 ರೂ. ನಷ್ಟು ಇಳಿಕೆ ಕಂಡಿವೆ. ನಾಟಿ ಕೋಳಿ 250-300 ರೂ.ನಂತೆ ಮಾರಾಟವಾಗುತ್ತಿದೆ. ಮಟನ್ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿವೆ. ಮೊಟ್ಟೆ ಧಾರಣೆ ಕೊಂಚ ಕಡಿಮೆಯಾಗಿದ್ದು ಡಜನ್ ಮೊಟ್ಟೆ 60 ರೂ.ನಂತೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಹಲವು ಕೆರೆ-ಕಟ್ಟೆಗಳು ತುಂಬಿ ಕೋಡಿ ಬೀಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಜನರಿಗೆ ಕೆಲವೆಡೆ ಪುಕ್ಕಟೆ, ಇನ್ನೂ ಕೆಲವೆಡೆ ಅಗ್ಗದ ದರದಲ್ಲಿ ಮೀನು ದೊರೆಯುತ್ತಿದ್ದು, ಮೀನು ಮಾರಾಟ ಅಂಗಡಿಗಳಲ್ಲಿ ಮಾರಾಟ ಕಳೆಗುಂದಿದೆ. ಡಿಸೆಂಬರ್‍ನಲ್ಲಿ ಕ್ರಿಸ್‍ಮಸ್ ಹಬ್ಬ ಇದ್ದು, ಕೋಳಿ ಮಾಂಸ ಮತ್ತು ಮೊಟ್ಟೆ ಧಾರಣೆ ಹೆಚ್ಚಳವಾಗುವ ಲಕ್ಷಣವಿದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ವ್ಯಾಪಾರಿ ಕರವೇ ಶ್ರೀನಿವಾಸ್.
ಟೊಮೆಟೊ ಹಾವು-ಏಣಿ ಆಟ :
ವಾಯುಭಾರ ಕುಸಿತಕ್ಕಿಂತ ಮುಂಚೆ 20 ರೂ. ಇದ್ದ ಟೊಮೆಟೊ ಬೆಲೆ ನಂತರದಲ್ಲಿ ಅಕಾಲಿಕ ಮಳೆಯಿಂದಾಗಿ ಏರುತ್ತಾ ಸಾಗಿತ್ತು. ತಿಂಗಳ ಹಿಂದೆ 40 ರೂ. ನಂತರ 60 ರೂ. ಕಳೆದವಾರ ದಾಖಲೆಯ 80-100 ರೂ. ಗೆ ಮಾರಾಟವಾಗುವ ಮೂಲಕ ಗ್ರಾಹಕರಿಗೆ ಬಿಸಿ ತಾಕಿಸಿದ್ದ ಈ ಕೆಂಪು ಬಂಗಾರ ಈ ವಾರ ಮತ್ತೆ 60-70 ರೂ. ಗೆ ಮಾರಾಟವಾಗುತ್ತಿದೆ. ಮಳೆಯ ಕಾರಣದಿಂದ ಮಾರುಕಟ್ಟೆಗೆ ಹೆಚ್ಚು ಟೊಮೆಟೊ ಬರುತ್ತಿಲ್ಲ. ಈ ನಡುವೆ ಮದುವೆ ಸೀಸನ್ ಸಹ ಇದ್ದು, ಬೆಂಗಳೂರು, ದೂರದ ಚೆನ್ನೈನಿಂದಲೂ ಸಗಟು ವ್ಯಾಪಾರಿಗಳು ಅಂತರಸನಹಳ್ಳಿ ಮಾರುಕಟ್ಟೆಗೆ ಬಂದು ಟೊಮೊಟೊ ಖರೀದಿಸುತ್ತಿರುವುದು ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ. ತರಕಾರಿ ವರ್ತಕ ವಾಸು.
ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)
ಸೇಬು -120-160
ದಾಳಿಂಬೆ- 180-200
ಮೊಸಂಬಿ -60-80
ಕಿತ್ತಳೆ -40-50
ಸಪೋಟ- 40-60
ಏಲಕ್ಕಿ ಬಾಳೆ- 40-50
ಪಚ್ಚ ಬಾಳೆ -20-30
ಪಪ್ಪಾಯ -30
ಕಲ್ಲಂಗಡಿ -60
ಕರಬೂಜ -80
ಸೀಬೆ -50-60
ಪೈನಾಪಲ್- 40-50
ದ್ರಾಕ್ಷಿ -160-180
ತರಕಾರಿ (ಬೆಲೆ ಕೆ.ಜಿ ರೂ.)
ಟೊಮೆಟೊ =70-80
ಈರುಳ್ಳಿ =35-40
ಆಲೂಗಡ್ಡೆ= 35-40
ಬೀನ್ಸ್= 80-90
ಕ್ಯಾರೆಟ್ =50-60
ಬೀಟ್ರೂಟ್= 30-40
ಮೂಲಂಗಿ =80
ಗೆಡ್ಡೆಕೋಸು =70-80
ನುಗ್ಗೆಕಾಯಿ =150-200
ಬದನೆಕಾಯಿ =50-60
ಎಲೆಕೋಸು= 40
ಹೂಕೋಸು =80-100
ಹಸಿ ಮೆಣಸಿನಕಾಯಿ= 40
ಕ್ಯಾಪ್ಸಿಕಂ= 120
ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 130
ಫಾರಂ 110
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 120-150
ಮೊಟ್ಟೆ (1 ಡಜನ್) 60
ಕೊಬ್ಬರಿ ಧಾರಣೆ
ಪ್ರತಿ ಕ್ವಿಂಟಾಲ್
ಕನಿಷ್ಠ =15,500
ಗರಿಷ್ಠ =17,300
ಮಾದರಿ =17,000
ಒಟ್ಟು ಆವಕ =1341.60 ಕ್ವಿಂಟಾಲ್
(3120 ಚೀಲ)
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ