ಕೊಪ್ಪಳ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಬಳಿಯೂ ದುಡ್ಡು ತೆಗೆದುಕೊಳ್ಳಲ್ಲ. ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಮಾಜಿ, ಶಾಸಕ ಜನಾರ್ದನ ರೆಡ್ಡಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್ಗೆ ದುಡ್ಡು ಕೊಡುವ ಸಿಎಂ ಬೇಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು ಅವರನ್ನು ಸಿಎಂ ಸ್ಥಾನದಿಂದ ಇಳಿಸಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ ಮತ್ತು ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಡಿ.ಕೆ.ಶಿವಕುಮಾರ್ರಂತಹ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಡಿ.ಕೆ. ಶಿವಕುಮಾರ್ರನ್ನು ಸಿಎಂ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ. ಮಂಡ್ಯ ಸಮಾವೇಶದಲ್ಲಿ ರಾಹುಲ್ ಗಾಂಧಿ ಈ ಸಂದೇಶ ರವಾನೆ ಮಾಡಿದ್ದಾರೆ ಎಂದರು.
ಇದೇ ವೇಳೆ ಸಚಿವ ಶಿವರಾಜ್ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದ ಜನಾರ್ದನ ರೆಡ್ಡಿ, ಹೀಗೆ ಮೋದಿ ವಿರುದ್ಧ ಶಿವರಾಜ ತಂಗಡಗಿ ಮಾತನಾಡುತ್ತಿದ್ದರೆ, ಜನ ಅವರನ್ನು ಮಂತ್ರಿ ಅಂತಾ ಕರೆಯಲ್ಲ, ಬದಲಾಗಿ ಕಂತ್ರಿ ಎಂದು ಕರೆಯುತ್ತಾರೆ. ಕಾಂಗ್ರೆಸ್ ಅಂದರೆ ಸಂಸ್ಕೃತಿ ಇಲ್ಲದ ಪಕ್ಷ. ಭಾರತ್ ಮಾತಾ ಕೀ ಜೈ ಎನ್ನಲು ಅಲ್ಲಿ ಪರವಾನಗಿ ಪಡೆಯಬೇಕು ಎಂದು ಕಿಡಿಕಾರಿದರು.