ಕಂದಾಯ ಇಲಾಖೆಯಲ್ಲಿ ನಿತ್ಯನರಕದಾಟ

ತುಮಕೂರು:

             ನಮ್ಮ ಇಡೀ ವ್ಯವಸ್ಥೆಯಲ್ಲಿ ಅತ್ಯಂತ ಭ್ರಷ್ಟ ಹಾಗೂ ಹೊಣೆಗೇಡಿ ಇಲಾಖೆಯ ಪಟ್ಟಿಗೆ ಕಂದಾಯ ಇಲಾಖೆ ಸೇರಿಬಿಟ್ಟಿದೆ. ಯಾವುದಾದರೊಂದು ದಾಖಲೆ ಪಡೆಯಲು ಅದೆಷ್ಟು ಬಾರಿ ಕಚೇರಿಗಳಿಗೆ ಅಲೆಯಬೇಕೋ ಲೆಕ್ಕಕ್ಕಿಲ್ಲ.

ಈ ಇಲಾಖೆಯೊಳಗೆ ಕೆಲಸ ಮಾಡುವ ಅಧಿಕಾರಿ-ನೌಕರರು ಜಿಡ್ಡುಗಟ್ಟಿ ಹೋಗಿದ್ದಾರೆ. ಎಲ್ಲೋ ಬೆರಳೆಣಿಕೆಯ ಮಂದಿಯನ್ನು ಹೊರತುಪಡಿಸಿದರೆ ಉಳಿದೆಲ್ಲ ಟೇಬಲ್ ಕೆಳಗಿನ ವ್ಯವಹಾರ ಮಾಡುವವರೇ ಆಗಿದ್ದಾರೆ.

ಒಂದಲ್ಲಾ ಒಂದು ಕಾರಣಕ್ಕಾಗಿ ಪ್ರತಿ ನಾಗರಿಕರಿಗೆ ಕಂದಾಯ ಇಲಾಖೆ ಎಡತಾಕುವುದು ಅನಿವಾರ್ಯ. ಗ್ರಾಮೀಣ ಪ್ರದೇಶಗಳ ಜನರಿಗೆ ಈ ಇಲಾಖೆ ಮತ್ತಷ್ಟು ಅನಿವಾರ್ಯ. ತಮ್ಮದೆ ಜಮೀನಿನ ಅಗತ್ಯ ದಾಖಲಾತಿಗಳನ್ನು ಪಡೆಯುವುದರಿಂದ ಹಿಡಿದು ಇನ್ನಿತರೆ ದಾಖಲೆಗಳಿಗೆ ತಿಂಗಳಾನುಗಟ್ಟಲೆ ಅಲೆಯುವಂತಹ ಪರಿಸ್ಥಿತಿ ಇಲ್ಲಿದೆ.

ಒಂದು ದಾಖಲೆ ಪಡೆದು ಹೊರಬರುವಷ್ಟರಲ್ಲಿ ಜನ ಹೈರಾಣಾಗಿ ಹೋಗುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಮೂಲಕ ಅಥವಾ ಬೇರೊಂದು ಮಾರ್ಗದಲ್ಲಿ ಹೋಗುವವರು ಸುಲಭವಾಗಿ ದಾಖಲೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇಂತಹ ಜಿಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಯ ವೈಖರಿ ಸರ್ಕಾರದ ಗಮನಕ್ಕೆ ಬಂದಿಲ್ಲವೆಂದಲ್ಲ. ಆದರೂ ಏನೂ ಮಾಡಲಾಗುತ್ತಿಲ್ಲ. ಬಹಳ ವರ್ಷಗಳಿಂದ ಇದಕ್ಕೊಂದು ಹೊಸ ರೂಪ ತರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಕೆಲವೊಂದು ಪ್ರಯತ್ನಗಳೂ ಆಗಿವೆ.

ಹಿಂದೆಲ್ಲ ಕೈಬರವಣಿಗೆಯ ಪಹಣಿ ಪಡೆಯಲು ಗ್ರಾಮ ಲೆಕ್ಕಿಗರ ಕಚೇರಿಗೆ ಅಲೆಯಬೇಕಿತ್ತು, ಆತನ ಕೈಬಿಸಿ ಮಾಡಬೇಕಿತ್ತು. ಆದರೆ ಈಗ ಭೂಮಿ ಕೇಂದ್ರ ತಂತ್ರಾಂಶದ ಮೂಲಕ ನಿಗದಿತ ಶುಲ್ಕ ಪಾವತಿಸಿ ಕೆಲವೇ ನಿಮಿಷಗಳಲ್ಲಿ ಪಹಣಿ ಪಡೆಯಬಹುದು. ಹೀಗೆ ಕೆಲವೊಂದು ಸುಧಾರಣೆಗಳಾಗಿವೆ, ಇನ್ನೂ ಆಗಬೇಕಿದೆ.

ಇತ್ತೀಚೆಗೆ ಸರ್ಕಾರ ಮತ್ತೊಂದು ಹೊಸ ನಿಯಮ ಜಾರಿಗೆ ತರಲು ಹೊರಟಿದೆ. ಇದೇ ಜನವರಿ 26 ರಿಂದ ಕಂದಾಯ ಇಲಾಖೆಯ ದಾಖಲೆಗಳು ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಸಂಬಂಧ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ದಾಖಲೆಗಳನ್ನು ಮುದ್ರಣಗೊಳಿಸಲು ಸೂಚಿಸಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಹಣಿ, ಜಮೀನು ನಕ್ಷೆ, ಆದಾಯ ಮತ್ತು ಜಾತಿ ವರಮಾನ ಪತ್ರಗಳನ್ನು ಏಕಕಾಲದಲ್ಲಿ ರಾಜ್ಯಾದ್ಯಂತ ಮನೆ ಬಾಗಿಲಿಗೆ ವಿತರಿಸುವ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

ಕಂದಾಯ ಇಲಾಖೆಯ ಭೂಮಿ ತಂತ್ರಾಂಶದ ಕೋಶವು ಪಹಣಿ ಮತ್ತು ರೈತರ ಜಮೀನಿನ ನಕ್ಷೆ ಮುದ್ರಿಸಲು ಹಾಗೂ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮುದ್ರಿಸಲು ಮುದ್ರಣದಾರರಿಗೆ ಅನುಕೂಲವಾಗುವಂತೆ ಪಿಡಿಎಫ್ ಮಾದರಿಯಲ್ಲಿ ದಾಖಲೆಗಳನ್ನು ನೀಡಲು ಸೂಚಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ 31 ಜಿಲ್ಲೆಗಳಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ 62.85 ಲಕ್ಷ ರೈತರಿದ್ದಾರೆ. ಪಹಣಿ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ರಾಜ್ಯದ ಪ್ರತಿ ರೈತರ ಮನೆಗೆ ಲಕೋಟೆಯಲ್ಲಿ ತಲುಪಿಸುವ ವ್ಯವಸ್ಥೆಗೆ ಚಿಂತನೆಗಳು ನಡೆದಿವೆ.

ಸರ್ಕಾರದ ಈ ನಿರ್ಧಾರ ಜಾರಿಯಾದರೆ ರೈತರು ಪ್ರಮುಖ ಈ ಮೂರು ದಾಖಲೆಗಳಿಗೆ ಪದೆ ಪದೆ ಅಲೆಯುವುದು ತಪ್ಪಿದಂತಾಗುತ್ತದೆ. ಪಹಣಿಯನ್ನು ನಿಗದಿತ ಕೇಂದ್ರಗಳಲ್ಲಿ 20 ರೂ. ಪಾವತಿಸಿ ಪಡೆಯಬಹುದು. ಆದರೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಜಮೀನು ನಕ್ಷೆ ಪಡೆಯಲು ಅಲೆದಾಟ ತಪ್ಪಿದ್ದಲ್ಲ. ಇಲ್ಲಿರುವ ಅವ್ಯವಸ್ಥೆ ಸರಿ ಹೋಗಬೇಕು.

ದಾಖಲೆಗಳನ್ನು ಲಕೋಟೆಯಲ್ಲಿ ಎಷ್ಟು ದಿನಗಳ ಒಳಗೆ ತಲುಪಿಸಲಾಗುತ್ತಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇವೆಲ್ಲವೂ ಕರಾರುವಕ್ಕಾಗಿ ಆಗಬೇಕು. ಇಲ್ಲದೆ ಹೋದರೆ ಇಲ್ಲಿಯೂ ಮತ್ತೆ ವಿಳಂಬ ಗತಿಯಾಗಿ ಅರ್ಜಿ ಎಲ್ಲಿ ಸೇರಿದೆ ಎಂಬುದನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಈ ಇಲಾಖೆ ವ್ಯವಸ್ಥೆಯೊಳಗಿನ ಕೈಚಳಕಗಳು ಗೊತ್ತಿಲ್ಲವೆಂದಲ್ಲ.

ವಾಯಿದೆ ನಿಗದಿಯಾಗಲಿ

ಪ್ರತಿಯೊಂದು ಅರ್ಜಿ ವಿಲೇವಾರಿಗೆ ಇಂತಿಷ್ಟು ದಿನಗಳೆಂಬ ವಾಯಿದೆ ನಿಗದಿಯಾಗಬೇಕು. ಅಷ್ಟರೊಳಗೆ ದಾಖಲೆಗಳು ಸಂಬಂಧಿಸಿದವರ ಮನೆ ತಲುಪುವಂತಿರಬೇಕು. ಇಲ್ಲಿಯೂ ವಿಳಂಬ ಗತಿಯಾದರೆ ಈ ಹೊಸ ಯೋಜನೆ ಕೇವಲ ಘೋಷಣೆಗಷ್ಟೇ ಸೀಮಿತ.

ಉದ್ದೇಶಪೂರ್ವಕವಾಗಿ ತಡೆ ಹಿಡಿಯುವ, ಅರ್ಜಿಯನ್ನೇ ಇನ್ನಿಲ್ಲವಾಗಿಸುವ ಅಥವಾ ಕಾಣೆಯಾಗಿಸುವ, ಅರ್ಜಿ ಇದ್ದರೂ ಸಬೂಬು ಹೇಳುವ, ಸಣ್ಣಪುಟ್ಟ ತಪ್ಪುಗಳನ್ನೇ ಮುಂದಿಟ್ಟು ಶೋಷಣೆ ಮಾಡುವ ಪ್ರವೃತ್ತಿಗಳು ಮರುಕಳಿಸಿದರೆ ಈ ಯೋಜನೆಯಿಂದ ಯಾವ ಸಾರ್ಥಕತೆಯೂ ಇಲ್ಲ.

ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕ

ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಂಬಳ ಸಾರಿಗೆಯ ಸೌಲಭ್ಯಗಳಿವೆ. ಹೀಗಿದ್ದೂ ಅತ್ತಿತ್ತ ನೋಡುವ ಪ್ರವೃತ್ತಿಯೇ ಹೆಚ್ಚು. ಬೇಕೆಂದೆ ಅರ್ಜಿ ವಿಲೇವಾರಿ ವಿಳಂಬ ಮಾಡುವ, ನೆಪ ಹೇಳುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಅರ್ಜಿಗಳನ್ನು ಕಳೆಯುವ, ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ, ಇಲಾಖಾಧಿಕಾರಿಗಳ ಕಣ್ತಪ್ಪಿನಿಂದಲೇ ಆಗುವ ಎಡವಟ್ಟುಗಳಿಗೆ ಅರ್ಜಿದಾರರನ್ನೇ ಬಲಿಪಶು ಮಾಡುವ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವ್ಯವಸ್ಥೆ ಶೀಘ್ರ ಜಾರಿಯಾಗಬೇಕು.

–      ಸಾ.ಚಿ. ರಾಜಕುಮಾರ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link