ಬೆಂಗಳೂರು:
ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯದ ರಾಜಭವನದ ಹೆಸರನ್ನು ಬದಲಾಯಿಸಲಾಗಿದೆ. ರಾಜಭವನಕ್ಕೆ ಲೋಕಭವನ ಎಂದು ಮರುನಾಮಕರಣ ಮಾಡಿರುವುದಾಗಿ ರಾಜ್ಯ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯವು ನೀಡಿರುವ ನಿರ್ದೇಶನಗಳನ್ನು ಅನುಸರಿಸಿ ರಾಜಭವನಕ್ಕೆ ಲೋಕ ಭವನ ಎಂದು ಮರುನಾಮಕರಣ ಮಾಡಲಾಗಿದೆ. ಈಗಾಗಲೇ ತಮಿಳುನಾಡು, ಕೇರಳ, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜಭವನದ ಹೆಸರನ್ನು ಲೋಕ ಭವನ ಎಂದು ಮರು ನಾಮಕರಣ ಮಾಡಲಾಗಿದೆ.
ವಸಾಹತುಶಾಹಿ ಯುಗದ ನೆನಪಾಗಿರುವ ಹೆಸರುಗಳನ್ನು ತೆಗೆದು ಹಾಕಲು ದೇಶಾದ್ಯಂತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ಇದೀಗ ಕರ್ನಾಟಕದ ರಾಜಭವನದ ಹೆಸರನ್ನು ಕೂಡ ಅಧಿಕೃತವಾಗಿ ಲೋಕ ಭವನ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ಬುಧವಾರ ರಾಜ್ಯ ಸರ್ಕಾರವು ತನ್ನ ಅಧಿಸೂಚನೆಯನ್ನು ಹೊರಡಿಸಿದೆ.
ರಾಜ್ಯ ಸರ್ಕಾರದ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕಳುಹಿಸಿರುವ ರಾಜ್ಯ ಸರ್ಕಾರವು ಇನ್ನು ಮುಂದೆ ಎಲ್ಲರೂ ರಾಜಭವನ ಕರ್ನಾಟಕವನ್ನು ಲೋಕ ಭವನ ಎಂದು ಉಲ್ಲೇಖಿಸಲು ಸೂಚಿಸಿರುವುದಾಗಿ ಹೇಳಿದೆ. ಭವಿಷ್ಯದ ಎಲ್ಲಾ ಪತ್ರವ್ಯವಹಾರಗಳಲ್ಲಿ ‘ರಾಜಭವನ ಕರ್ನಾಟಕ’ದ ಬದಲಿಗೆ ‘ಲೋಕ ಭವನ ಕರ್ನಾಟಕ’ ಎಂದೇ ಉಲ್ಲೇಖಿಸುವಂತೆ ಎಲ್ಲಾ ರಾಜ್ಯ ಸರ್ಕಾರದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಹೊರಡಿಸಿರುವ ಅನುಮೋದನೆಯನ್ನು ಅಂಗೀಕರಿಸಲಾಗಿದೆ ಎಂದು ಸೂಚನೆಯಲ್ಲಿ ತಿಳಿಸಿದೆ. ಈಗಾಗಲೇ ತಮಿಳುನಾಡು, ಕೇರಳ, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರಾಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬಗ್ಗೆ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.








