ಮಮದಾಪುರ ಅರಣ್ಯಕ್ಕೆ ಮರುನಾಮಕರಣ….!

ಬೆಂಗಳೂರು:

   ವಿಜಯಪುರದ ಮಮದಾಪುರ ಗ್ರಾಮ ಪಂಚಾಯಿತಿಯ 1,494.38 ಎಕರೆ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆಯ ತಾಣ ಎಂದು ಘೋಷಿಸಿ ರಾಜ್ಯ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

   ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು, ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯ ಸ್ಮರಣೆಯ ದಿನವಾದ ಜನವರಿ 2ರಂದು ವಿಜಯಪುರದಲ್ಲಿ ವಿಧ್ಯುಕ್ತವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಫಲಕವನ್ನು ಅನಾವರಣ ಮಾಡಲಾಗುವುದು ಎಂದು ಹೇಳಿದರು.

   ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೇ.5ರಷ್ಟು ಅರಣ್ಯ ಪ್ರದೇಶವಿದ್ದು, ವಿಜಯಪುರದಲ್ಲಿ ಶೇ.1ಕ್ಕಿಂತ ಕಡಿಮೆ ಇದೆ. ಸರ್ಕಾರ ಈ ಘೋಷಣೆಯು ಹಸಿರು ಹೊದಿಕೆಯ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.

   ವಿವಿಧ ಕಾಲಾವಧಿಯಲ್ಲಿ ಮಮದಾಪುರ ಭಾಗದಲ್ಲಿನ ಅರಣ್ಯ ಪ್ರದೇಶಗಳ ಅಧಿಸೂಚನೆಯಾಗಿದ್ದು, ಪ್ರಸ್ತುತ ಸುಮಾರು 1494 ಎಕರೆ 38 ಗುಂಟೆ ವಿಸ್ತೀರ್ಣದ ಅರಣ್ಯವಿದೆ. ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಮತ್ತು ಸಸ್ಯ ಸಂಕುಲದಿಂದ ಕೂಡಿರುವ ಶ್ರೀಮಂತ ಜೀವವೈವಿಧ್ಯತೆಯ ಈ ತಾಣಕ್ಕೆ ಸಿದ್ದೇಶ್ವರ ಸ್ವಾಮೀಜಿ ಜೀವವೈವೀಧ್ಯ ಪಾರಂಪರಿಕ ತಾಣ ಎಂದು ಜೀವವೈವಿಧ್ಯ ಕಾಯಿದೆ 2022ರ ಸೆಕ್ಷನ್ 37ರನ್ವಯ ಮರು ನಾಮಕರಣ ಮಾಡಲಾಗುತ್ತಿದೆ. ಮಮದಾಪುರದ ಅಧಿಸೂಚಿತ ಅರಣ್ಯ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಿಂದ ಕೂಡಿದ ಪ್ರದೇಶವಾಗಿದ್ದು, ಚಿರತೆಗಳು, ನರಿಗಳು, ಕತ್ತೆ ಕಿರುಬಗಳು ಮತ್ತು ಹಲವಾರು ಪ್ರಭೇದದ ಪಕ್ಷಿಗಳ ತಾಣವಾಗಿದೆ. ಸಸ್ಯ ಸಂಕುಲ, ಕೀಟ ಸಂಕುಲದ ನೆಲೆವೀಡೂ ಆಗಿದೆ.

    ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ಅರಣ್ಯ ಪ್ರದೇಶವೇ ಕಡಿಮೆ ಇದ್ದು, ಇರುವ ವನ ಪ್ರದೇಶವನ್ನು ಮತ್ತು ಇಲ್ಲಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು ಇಂದಿನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಿದ್ಧೇಶ್ವರ ಶ್ರೀಗಳ ಹೆಸರನ್ನು ಈ ಕಾನನ ಪ್ರದೇಶಕ್ಕೆ ಇಡುವುದರಿಂದ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲೂ ನೆರವಾಗಲಿದೆ ಎಂದು ತಿಳಿಸಿದ್ದಾರೆ.

   ಅರಣ್ಯ ಭೂಮಿಯನ್ನು ಪಾರಂಪರಿಕ ತಾಣವೆಂದು ಘೋಷಿಸುವುದರಿಂದ ಸಸ್ಯ ಮತ್ತು ಪ್ರಾಣಿ ಸಂಕುಲದ ರಕ್ಷಣಾ ಕ್ರಮಗಳನ್ನು ಹೆಚ್ಚಿಸಬಹುದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ವಿಜಯಪುರದಲ್ಲಿ ಅರಣ್ಯ ಇಲಾಖೆಗೆ ಒಳಪಡುವ ಒಟ್ಟು ಜಮೀನು 2 ಸಾವಿರ ಹೆಕ್ಟೇರ್. ಈ ಪಾರಂಪರಿಕ ತಾಣದಲ್ಲಿ ಎರಡು ಕೆರೆಗಳು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿದೆ. ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾಡಿನಲ್ಲಿ ಜನವಸತಿ ಇಲ್ಲ. 200 ಹೆಕ್ಟೇರ್‌ನಲ್ಲಿ ಹನಿ ನೀರಾವರಿ ಮೂಲಕ ಹಸಿರು ಹೊದಿಕೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap