ಬೆಂಗಳೂರು :
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆರೋಪಿ ದರ್ಶನ್ ಜಾಮೀನು ಅರ್ಜಿ ಕುರಿತ ವಿಚಾರಣೆ ಕಳೆದ ಕೆಲವು ದಿನಗಳಿಂದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದಿದ್ದು, ದರ್ಶನ್ ಪರ ವಕೀಲ ಸಿವಿ ನಾಗೇಶ್ ಹಾಗೂ ಎಸ್ಪಿಪಿ ಪ್ರಸನ್ನ ಕುಮಾರ್ ನಡುವೆ ತುರುಸಿನ ವಾದ-ಪ್ರತಿವಾದಗಳು ನಡೆದಿವೆ. ಇಬ್ಬರೂ ವಕೀಲರು ಕಟುವಾದ ವಾದ ಸರಣಿಯನ್ನು ನ್ಯಾಯಾಲಯದ ಮುಂದಿರಿಸಿದ್ದಾರೆ. ಇಂದೂ ಸಹ ವಾದ ನಡೆದಿದ್ದು, ಇಬ್ಬರೂ ವಕೀಲರು ತಮ್ಮ ವಾದಗಳನ್ನು ಅಂತ್ಯಗೊಳಿಸಿದ್ದು, ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 14ಕ್ಕೆ ಕಾಯ್ದಿರಿಸಿದ್ದಾರೆ.
ಅಕ್ಟೋಬರ್ 14 ರಂದು ಎ2 ಆರೋಪಿ ದರ್ಶನ್ಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ತಿಳಿಯಲಿದೆ. ಅದೇ ದಿನ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ8 ರವಿಶಂಕರ್, ಎ8, ಎ11, ಎ12 ಹಾಗೂ ಎ13 ಅವರ ಜಾಮೀನು ಅರ್ಜಿಯ ಆದೇಶವೂ ಅದೇ ದಿನ ಹೊರಬೀಳಲಿದೆ. ಅಕ್ಟೋಬರ್ 14 ರಂದು ಎ13 ದೀಪಕ್ಗೆ ಜಾಮೀನು ಸಿಗುವುದು ಖಾತ್ರಿಯಾಗಿದೆ. ಏಕೆಂದರೆ ದೀಪಕ್ ಗೆ ಜಾಮೀನು ನೀಡಲು ಎಸ್ಪಿಪಿ ತಕರಾರು ಎತ್ತಿಲ್ಲ. ಆದರೆ ಇನ್ನುಳಿದ ಯಾವುದೇ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದಿದ್ದಾರೆ.
ಇಂದು ನಡೆದ ವಾದದಲ್ಲಿ ಸಿವಿ ನಾಗೇಶ್, ಎಸ್ಪಿಪಿ ಅವರು ಕಳೆದ ಎರಡು ದಿನಗಳಲ್ಲಿ ಸಲ್ಲಿಸಿದ ವಾದಕ್ಕೆ ಪ್ರತಿವಾದ ಹೂಡಿದರು. ಇಂದು, ನಾಗೇಶ್ ಅವರು, ಆರೋಪಿಗಳು ಮತ್ತು ಸಾಕ್ಷಿಗಳ ಲೊಕೇಶನ್ ಒಂದೇ ಕಡೆ ಇದ್ದವೆಂದು ಪೊಲೀಸರು ಮಾಡಿರುವ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದಾದ ಬಳಿಕ ಒಬ್ಬ ಸಾಕ್ಷಿಯ ಹೇಳಿಕೆಯನ್ನು 13 ದಿನ ತಡವಾಗಿ ದಾಖಲಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಆ ಸಾಕ್ಷಿಯನ್ನು ಪೊಲೀಸರೇ ಸೃಷ್ಟಿಸಿದ್ದಾರೆ. ಬೇಕೆಂದೆ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಆ ವರದಿಗೆ ಹೋಲಿಕೆ ಆಗುವಂತೆ ಸಾಕ್ಷಿಯಿಂದ ಹೇಳಿಕೆ ಪಡೆಯಲಾಗಿದೆ ಎಂದು ವಾದಿಸಿದರು.
ದರ್ಶನ್ರ ಶೂ ಕುರಿತಾಗಿ ಕೆಲವು ವಾದಗಳನ್ನು ಮುಂದಿಟ್ಟರು, ದರ್ಶನ್ ಮೊಬೈಲ್ ಸಂಖ್ಯೆ, ಎಫ್ಎಸ್ಎಲ್ ವರದಿಗಳು ಇನ್ನೂ ಕೆಲವು ವಿಷಯಗಳ ಬಗ್ಗೆ ವಾದ ಮುಂದಿಟ್ಟ ನಾಗೇಶ್, ಒಂದು ಹಂತದಲ್ಲಿ ಕೃತ್ಯ ನಡೆದಾಗ ದರ್ಶನ್ ಸ್ಥಳದಲ್ಲಿ ಇಲ್ಲವೇ ಇಲ್ಲ ಎಂಬ ರೀತಿಯಲ್ಲಿಯೂ ವಾದಿಸಿದರು. ಕೆಲವು ಸುಪ್ರೀಂ ಕೋರ್ಟ್ ಆದೇಶಗಳನ್ನು ಪ್ರಸ್ತುತ ಪಡಿಸಿ ದರ್ಶನ್ ಪ್ರಭಾವಿ ಆಗಿದ್ದರೂ ಸಹ ಜಾಮೀನು ನೀಡಬಹುದು ಎಂದರು.