ರೆಪೋ ದರ : 11ನೇ ಬಾರಿ ಯಥಾಸ್ಥಿತಿ….!

ಹೊಸದಿಲ್ಲಿ:

     ಭಾರತೀಯ ರಿಸರ್ವ್ ಬ್ಯಾಂಕ್  ನಿರೀಕ್ಷೆಯಂತೆ ರೆಪೋ ದರ  ಅಥವಾ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ರೆಪೋ ದರ ಹಿಂದಿನಂತೆ ಶೇ. 6.5ರಲ್ಲಿಯೇ ಮುಂದುವರಿಯಲಿದೆ. ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬ ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್  ತಿಳಿಸಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ.

    ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ ಡಿ. 4ರಂದು ಆರಂಭವಾಗಿತ್ತು. 3 ದಿನ ನಡೆದ ಈ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

    ಕಳೆದ ಒಂದೂವರೆ ವರ್ಷದಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದರೆ ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು. ಹಿಂದಿನ 10 ಸಭೆಗಳಲ್ಲಿಯೂ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಈ ಬಾರಿಯೂ ಅದನ್ನೇ ಮುಂದುವರಿಸಲಾಗಿದೆ. 

   ಹಣದುಬ್ಬರವನ್ನು ನಿಯಂತ್ರಿಸುವುದೇ ಆರ್‌ಬಿಐಯ ಪ್ರಮುಖ ಗುರಿ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಆರ್‌ಬಿಐಯ ಅಭಿಮತ. ಆರ್​ಬಿಐಗೆ ಹಣದುಬ್ಬರವನ್ನು ಶೇ. 4ಕ್ಕೆ ತರುವುದು ಮುಖ್ಯ ಗುರಿ. ಕೆಲ ತಿಂಗಳು ಹಣದುಬ್ಬರ ಶೇ. 5ರ ಒಳಗೆ ಬಂದಿತ್ತಾದರೂ, ಸದ್ಯ ಅಕ್ಟೋಬರ್​ನಲ್ಲಿ ಅದು ಶೇ. 6.21ಕ್ಕೆ ಏರಿದೆ. ಬಡ್ಡಿದರ ಇಳಿಸಿದರೆ ಹಣದುಬ್ಬರ ಇನ್ನಷ್ಟು ಏರುವ ಸಾಧ್ಯತೆ ಇದೆ. 

  ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಅಂದರೆ ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದುವೇ ರೆಪೋ ರೇಟ್‌. ಕೆಲವೊಮ್ಮೆ ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ ಬ್ಯಾಂಕ್‌ಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.

Recent Articles

spot_img

Related Stories

Share via
Copy link