ಫತೇಪುರ:
ಪತ್ರಕರ್ತನನ್ನು ಬರ್ಬರವಾಗಿ ಇರಿದು ಕೊಂದಿರುವ ಘಟನೆ ಉತ್ತರಪ್ರದೇಶದ ಫತೇಪುರದಲ್ಲಿ ನಡೆದಿದೆ. ಘಟನೆಯಲ್ಲಿ ಆತನ ಸ್ನೇಹಿತ, ಬಿಜೆಪಿ ಮುಖಂಡನಿಗೂ ಗಂಭೀರ ಗಾಯಗಳಾಗಿವೆ. ಮೃತ ದುರ್ದೈವಿಯನ್ನು ದಿಲೀಪ್ ಸೈನಿ ಎಂದು ಗುರುತಿಸಲಾಗಿದ್ದು, ಆತ ಮತ್ತು ದುಷ್ಕರ್ಮಿಗಳ ನಡುವೆ ಕೆಲ ವಿಚಾರಕ್ಕೆ ಜಗಳವಾಗಿತ್ತು. ಇದೇ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.
ದಿಲೀಪ್ ಮತ್ತು ಆತನ ಸ್ನೇಹಿತ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ವಿಭಾಗದ ಮುಖಂಡ ಶಾಹಿದ್ ಖಾನ್ ಹೊಟೇಲ್‌ವೊಂದರಲ್ಲಿ ಊಟ ಮಾಡುತ್ತಾ ಕುಳಿತಿದ್ದ ವೇಳೆ ಈ ದಾಳಿ ನಡೆದಿದೆ. ಈ ವೇಳೆ ಅಡ್ಡಬಂದ ಶಾಹಿದ್ ಮೇಲೆ ಗಾಯಗಳಾಗಿವೆ. ಈ ಬಗ್ಗೆ ಶಾಹಿದ್ ಪ್ರತಿಕ್ರಿಯಿಸಿದ್ದು, ನಾನು ಸೈನಿ ಅವರೊಂದಿಗೆ ಕಳೆದ ರಾತ್ರಿ ಊಟ ಮಾಡುತ್ತಿದ್ದೆ. ಏಕಾಏಕಿ ಹೊಟೇಲ್‌ಗೆ ನುಗ್ಗಿದ ದಾಳಿಕೋರರು ಒಳಗೆ ಬಂದು ದಿಲೀಪ್‌ಗೆ ಇರಿದಿದ್ದಾರೆ. ನಾನು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರು ನನಗೂ ಇರಿದಿದ್ದಾರೆ. ಜತೆಗೆ ಗುಂಡು ಹಾರಿಸಿದ್ದಾರೆ.
ಇನ್ನು ದಿಲೀಪ್ ಸೈನಿ ಮತ್ತು ಶಾಹಿದ್ ಖಾನ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ನಂತರ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾರಿ ಮಧ್ಯೆ ದಿಲೀಪ್ ಸೈನಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಫತೇಪುರ್ ಪೊಲೀಸ್ ಮುಖ್ಯಸ್ಥ ಧವಲ್ ಜೈಸ್ವಾಲ್ ಹೇಳಿದ್ದಾರೆ. “ಸುಮಾರು 38 ವರ್ಷ ವಯಸ್ಸಿನ ದಿಲೀಪ್ ಸೈನಿ ಅವರಿಗೆ ಚೂರಿ ಇರಿತವಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ದಾಳಿಕೋರರು ಮತ್ತು ಸೈನಿ ಮೊದಲಿನಿಂದಲೂ ಪರಿಚಯಸ್ಥರಾಗಿದ್ದು, ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು. ಇದೇ ದ್ವೇಷದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಎರಡು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 50 ವರ್ಷದ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ರಾಜಸ್ಥಾನದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪತ್ತೆಯಾಗಿವೆ. ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅನಿತಾ ಚೌಧರಿ ಕೊಲೆಯಾದ ದುರ್ದೈವಿ. ಆಕೆಯನ್ನು ಆರೋಪಿ ಗುಲಾಮುದ್ದೀನ್ ಅಲಿಯಾಸ್ ಗುಲ್ ಮೊಹಮ್ಮದ್ ಎಂಬಾತ ಬರ್ಬರವಾಗಿ ಕೊಲೆಗೈದು ಮೃತದೇಹವನ್ನು ಕತ್ತರಿಸಿ ತನ್ನ ಮನೆ ಬಳಿ ಹೂತು ಹಾಕಿದ್ದಾನೆ.
ಅಕ್ಟೋಬರ್ 28 ರಂದು ಸಂತ್ರಸ್ತೆ ಅನಿತಾ ಚೌಧರಿ ಮಧ್ಯಾಹ್ನ ತನ್ನ ಬ್ಯೂಟಿ ಪಾರ್ಲರ್ ಅನ್ನು ಮುಚ್ಚಿ ರಾತ್ರಿಯಾದರೂ ಹಿಂತಿರುಗಿರಲಿಲ್ಲ. ಮರುದಿನ, ಅವರ ಪತಿ ಮನಮೋಹನ್ ಚೌಧರಿ ಅವರು ಜೋಧ್‌ಪುರದ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಆರೋಪಿ ಗುಲಾಮುದ್ದೀನ್ ಅಲಿಯಾಸ್ ಗುಲ್ ಮೊಹಮ್ಮದ್ ಎಂಬಾತ ಅನಿತಾ ಅವರ ಬ್ಯೂಟಿ ಪಾರ್ಲರ್ ಇರುವ ಕಟ್ಟಡದಲ್ಲೇ ಅಂಗಡಿ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇಬ್ಬರಿಗೂ ಪರಿಚಯವಿದ್ದು, ಪರಸ್ಪರ ಸಲಿಗೆ ಹೊಂದಿದ್ದರು ಎನ್ನಲಾಗಿದೆ. ಸಂತ್ರಸ್ತೆಯ ಫೋನ್‌ನಲ್ಲಿನ ಕರೆ ವಿವರಗಳ ಪ್ರಕಾರ ಗುಲ್ ಮೊಹಮ್ಮದ್ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ.
