ಬೆಂಗಳೂರು
ಹಾಸನದ ಹಾಲಿ ಸಂಸದ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಅವರು ರಾಜ್ಯ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯಾದ ಬೆನ್ನಲ್ಲೆ ಅವರ ಅಮಾನತಿಗೆ ಪಕ್ಷದಲ್ಲೇ ಒತ್ತಡ ಕೇಳಿ ಬಂದಿದೆ.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಿಗೆ ಬರೆದ ಪತ್ರದಲ್ಲಿ, “ನಾನು ತುಂಬಾ ಕಿರಿಯ, ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟು ದೊಡ್ಡವನ್ನಲ್ಲ. ಆದರೆ ಪರಿಸ್ಥಿತಿ ಹಾಗೆ ಬಂದೊದಗಿದೆ. ಹೀಗಾಗಿ ತಮಗೆ ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ವ್ಯಕ್ತಪಡಿಸುತ್ತಿರುವೆ” ಎಂದಿದ್ದಾರೆ.
“ಕೆಲದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಅಶ್ಲೀಲ ವೀಡಿಯೋ ತುಣುಕುಗಳಿಂದ ಪಕ್ಷಕ್ಕೆ ತೀರಾ ಮುಜುಗರ ಉಂಟಾಗಿದೆ. ಸದರಿ ವೀಡಿಯೋ ದೃಶ್ಯಗಳಲ್ಲಿ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಮೇಲ್ನೋಟಕ್ಕೆ ಅವರು ತಪ್ಪಿತಸ್ಥರೆಂದು ಭಾವನೆ ಉಂಟಾಗಿದೆ. ಪ್ರಯುಕ್ತ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.
“ತಾವು ಆರು ದಶಕಗಳಿಗೂ ಮಿಕ್ಕಿ ನಡೆಸಿಕೊಂಡು ಬರುತ್ತಿರುವ ರಾಜಕೀಯ ಜೀವನ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ತತ್ವ-ಸಿದ್ಧಾಂತಗಳ ಬೂನಾದಿಯಮೇಲೆ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ್ದೀರಿ. ರಾಷ್ಟ್ರದ ಪ್ರದಾನಿಯಾದ ಮೊದಲ ಕನ್ನಡಿಗ ಎಂಬ ಅಭಿದಾನ ತಮ್ಮದಾಗಿದೆ. ಮಣ್ಣಿನ ಮಗನಾಗಿ ರೈತ ಜನಾಂಗದ ಏಳಿಗೆಗಾಗಿ ಸದಾ ಮಿಡಿಯುವ ನೇತರಾರರು ತಾವಾಗಿದ್ದೀರಿ. ಅದರಲ್ಲಿಯೂ “ಹೆಣ್ಣು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ” ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನು ಗೌರವಾದರಗಳಿಂದ ನೋಡಿಕೊಂಡು ಬಂದಿದ್ದೀರಿ” ಎಂದು ಪತ್ರದಲ್ಲಿ ಬರೆದಿದ್ದಾರೆ.
“ತಮ್ಮ ಪರಂಪರೆಯಲ್ಲಿ ಕುಮರಣ್ಣ ಅವರು ಮುಖ್ಯಮಂತ್ರಿಯಾದಗ ಲಾಟರಿ ನಿಷೇದ ಮಾಡಿ, ಕನ್ನಡ ನಾಡಿನ ಹೆಣ್ಣು ಮಕ್ಕಳ ಪುಣ್ಯಕ್ಕೆ ಪಾತ್ರರಾಗಿದ್ದಾರೆ. ಸೈಕಲ್ ಭಾಗ್ಯವನ್ನು ಕರುಣಿಸಿ ಹೆಣ್ಣು ಹುಡಿಗಿಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಜಾತ್ಯಾತೀತ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಿದ್ದೀರಿ. ತಮ್ಮ ಪಕ್ಷದ ಚಿಹ್ನೆಯು ಭತ್ತ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನು ಇದು ಪ್ರತಿನಿಧಿಸುತ್ತದೆಂದು ಎಲ್ಲರು ಭಾವಿಸಿದ್ದಾರೆ” ಎಂದು ಪಕ್ಷದ ಸಿದ್ಧಾಂತವನ್ನು ತಿಳಿಸಿದ್ದಾರೆ.
“ನಮ್ಮದು ಪ್ರಾದೇಶಿಕ ಪಕ್ಷ ತಾವು ರಾಷ್ಟ್ರ ಕಂಡ ಮಹಾ ಮುತ್ಸದ್ದಿ, ಅಂತಯೇ ಬಿ.ಜೆ.ಪಿ ರಾಷ್ಟ್ರೀಯ ಪಕ್ಷವಾದರು ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಿಮ್ಮ ಮಹತ್ವವನ್ನು ಎತ್ತಿತೊರಿಸುತ್ತದೆ.ಈ ಎಲ್ಲಾ ಹಿನ್ನಲೆ ಪರಂಪರೆಯನ್ನು ಹೊಂದಿರುವ ಪಕ್ಷಕ್ಕೆ ವೀಡಿಯೋ ಪ್ರಕರಣ ತೀವ್ರ ಮುಜುಗರ ತಂದಿರುವದಂತೂ ಸುಳ್ಳಲ್ಲ. ಈಗಾಗಲೇ ಸರ್ಕಾರದವರು ಸದರಿ ಪ್ರಕರಣವನ್ನು ಎಸ್.ಐ.ಟಿ.ಗೆ ಒಪ್ಪಿಸಿದ್ದಾರೆ. ದಯವಿಟ್ಟು ತಾವು ಪಕ್ಷದ ಆಂತರಿಕ ಸಮಿತಿಯನ್ನು ರಚನೆ ಮಾಡಿ, ಆ ಸಮಿತಿ ವೀಡಿಯೋ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ಗೊತ್ತು ಮಾಡುವಂತಾಗಲಿ, ಅಲ್ಲಿಯವರೆಗೆ ಪಕ್ಷದ ಮುಜುಗರವನ್ನು ತಪ್ಪಿಸಲು ಮತ್ತು ಎರಡನೇ ಹಂತದ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲು ಕೂಡಲೇ ಸಂಸದರಾದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ” ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ