ಕೊರಟಗೆರೆ :-
ಬಳ್ಳಾರಿ ಸಂಡೂರಿನ ಗಣಿ ಧಣಿಗಳ ವಕ್ರ ದೃಷ್ಟಿ ಕೊರಟಗೆರೆ ಕಡೆ ಹರಿದಿದ್ದು, 4 ಕಡೆ ಗಣಿಗಾರಿಕೆಗೆ ಸಿದ್ಧತೆ ನಡೆಸಿರುವ ಪ್ರದೇಶಗಳ ಬಳಿ ಪ್ರಮುಖ 3 ಧಾರ್ಮಿಕ ಮಠಗಳಿಗೆ , ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಎತ್ತಿನಹೊಳೆ ಯೋಜನೆ ಸೇರಿದಂತೆ ಸರ್ಕಾರಿ ಶಾಲೆಗಳಿಗೆ ಅಪಾಯವಿದ್ದು, ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ನೂರಾರು ಜನ ಸಾರ್ವಜನಿಕರು ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಘಟನೆ ಮಂಗಳವಾರ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ, ಮಣ್ಣೂರುತಿಮ್ಮನಹಳ್ಳಿ, ತಂಗನಹಳ್ಳಿ, ಸಿದ್ದಾಪುರ ಸರ್ವೆ ನಂಬರ್ ಗಳಲ್ಲಿ ಮಂಜೂರಾದ ಗಣಿಗಾರಿಕೆ ಪ್ರದೇಶಗಳ ಸ್ಥಳ ಪರಿಶೀಲನೆಗೆ ಬಂದ ಮಧುಗಿರಿ ಉಪ ವಿಭಾಗಾಧಿಕಾರಿ ಶಿವಪ್ಪ, ತಹಸೀಲ್ದಾರ್ ಮಂಜುನಾಥ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಸರ್ವೆ ಇಲಾಖೆಯವರು ಸೇರಿದಂತೆ ಇನ್ನಿತರ ಇಲಾಖೆಗಳ ಜಂಟಿ ಪರಿಶೀಲನೆ ಸಂದರ್ಭದಲ್ಲಿ ಅಕ್ಕಪಕ್ಕದ ಹತ್ತಾರು ಹಳ್ಳಿಗಳ ನೂರಾರು ಸಾರ್ವಜನಿಕರು ಗಣಿಗಾರಿಕೆಯಿಂದ ಬಹಳಷ್ಟು ಅನಾನುಕೂಲವಾಗಲಿದ್ದು ದಯಮಾಡಿ ಗಣೆಗಾರಿಕೆಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಕೊರಟಗೆರೆ ತಾಲೂಕಿನ ಪ್ರಮುಖ ಧಾರ್ಮಿಕ ಮಠಗಳಾದ ಎಲೇರಾಂಪುರದ ಕುಂಚಿಟಿಗ ಮಠ, ತಂಗನಹಳ್ಳಿ ಶ್ರೀ ಅನ್ನಪೂರ್ಣೇಶ್ವರಿ ಮಠ, ಹನುಮಂತಪುರದ ಶ್ರೀ ಲಕ್ಷ್ಮೀಶ್ವರ ಮಠ ಸೇರಿದಂತೆ ಸಾವಿರಾರು ಕೋಟಿ ರೂ ಅನುದಾನದ ಎತ್ತಿನಹೊಳೆ ಯೋಜನೆ, ಚತುಷ್ಪದ ಎಕ್ಸ್ಪ್ರೆಸ್ ವೇ , ಹಲವು ಸರ್ಕಾರಿ ಶಾಲೆಗಳು, ದೇವಸ್ಥಾನಗಳು ಸೇರಿದಂತೆ ನೂರಾರು ಬಡ ಕುಟುಂಬಗಳ ಸೂರಿಗೆ ಗಣಿಗಾರಿಕೆಯಿಂದ ಅಪಾಯ ಕಾದಿದ್ದು, ದಯಮಾಡಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆಗೆ ಪ್ರಯತ್ನ ಪಡುತ್ತಿರುವ ಬಳ್ಳಾರಿ ಗಣಿ ಧಣಿಗಳ ಸಾರಥ್ಯದಲ್ಲಿ ಪ್ರಾರಂಭವಾಗುವ ಗಣಿಗಾರಿಕೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಗಣಿಗಾರಿಕೆ ಪ್ರಾರಂಭವಾಗುವುದರಿಂದ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆತಂಕ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಸರ್ವೆ ನಂಬರ್ 57 ರಲ್ಲಿ 12.20 ಎಕರೆ ಬಿ. ಕುಮಾರಸ್ವಾಮಿ ತಂದೆ ಬಿ. ಸಿದ್ದಪ್ಪ, ಮಣ್ಣೂರ್ ತಿಮ್ಮನಹಳ್ಳಿ ಸರ್ವೆ ನಂಬರ್ 4ರ 19.20 ಎಕರೆ ರುದ್ರೇಗೌಡ ತಂದೆ ಕುಮಾರ ಗೌಡ, ತಂಗನಹಳ್ಳಿ ಸರ್ವೆ ನಂಬರ್ 32 ರಲ್ಲಿ 22., 20 ಎಕರೆ ಬಿ ಕುಮಾರಸ್ವಾಮಿ ತಂದೆ ಬಿ ಸಿದ್ದಪ್ಪ , ಸಿದ್ದಾಪುರ ಸರ್ವೆ ನಂಬರ್ 14.20 ಎಕರೆ ಜಮೀನನ್ನ ನಾಗೇಗೌಡ ತಂದೆ ಕುಮಾರಸ್ವಾಮಿ ಎಂಬವರಿಗೆ ಮಂಜೂರು ಮಾಡಲಾಗಿದ್ದು, ಗಣಿಗಾರಿಕೆಗೆ ಗುರುತಿಸಲಾಗಿರುವ ಸ್ಥಳ ಸಾರ್ವಜನಿಕ ವಲಯವಾಗಿದ್ದು, ದಯಮಾಡಿ ಅನುಮತಿ ನೀಡಬಾರದು ಎಂದು ಪರಿಶೀಲನೆಗೆ ಬಂದ ಅಧಿಕಾರಿಗಳನ್ನ ಮನವಿ ಮಾಡಿಕೊಂಡು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೊರಟಗೆರೆಗೆ ತ್ರೈಮಾಸಿಕ ಪ್ರಗತಿ ಪರಿಶೀಲ ಸಭೆ ಆಗಮಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯ ನೂರಾರು ಜನ ಸಾರ್ವಜನಿಕರು ಸಚಿವರಿಗೆ ಗಣಿಗಾರಿಕೆಗೆ ಅವಕಾಶ ಕೊಡದಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಮಧುಗಿರಿ ಉಪ ವಿಭಾಗಾಧಿಕಾರಿ ಶಿವಪ್ಪ, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆ, ಸರ್ವೆ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ರಸ್ತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲಿಸುವ ಸಂದರ್ಭದಲ್ಲಿ ನೂರಾರು ಜನ ಗ್ರಾಮಸ್ಥರು ಗಣಿಗಾರಿಕೆಯ ವಿರುದ್ಧ ಆರೋಪಗಳ ಸುರಿಮಳೆಗೆರೆದಿದ್ದಾರೆ.
ಪ್ರಥಮವಾಗಿ ನೀಲಗೊಂಡನಹಳ್ಳಿ ಸರ್ವೆ ನಂಬರ್ 57 ರಲ್ಲಿ 12.20 ಎಕರೆ ಜಮೀನಿನಲ್ಲಿ ಗಣಿಗಾರಿಕೆ ಮಂಜೂರು ಮಾಡಲಾದ ಪ್ರದೇಶಕ್ಕೆ ಅಧಿಕಾರಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ, ಗಣಿ ಮಾಲೀಕ ಗಣಿಗಾರಿಕೆಗೆ ರಸ್ತೆ ನಿರ್ಮಾಣಕ್ಕಾಗಿ ರಾಜಗಾಲುವೆ, ಎಂತಹ ಬೇಸಿಗೆ ಕಾಲದಲ್ಲೂ ನೀರು ಹಿಂಗದ ಗೋಕಟ್ಟೆ ಸೇರಿದಂತೆ ಇನ್ನಿತರ ಸರ್ಕಾರಿ ಜಾಗವನ್ನ ತನ್ನ ಬಳಕೆಗಾಗಿ ದುರುಪಯೋಗಪಡಿಸಿಕೊಂಡು ಗೋಕಟ್ಟೆ, ಚೆಕ್ ಡ್ಯಾಮ್ ಗಳನ್ನ ಮುಚ್ಚಿ, ರಾಜಗಾಲುವೆಯನ್ನ ಅತ್ತಿಕ್ರಮ ಮಾಡಿಕೊಂಡು ದುರುಪಯೋಗಪಡಿಸಿ ಕೊಂಡಿದ್ದಾರೆ ಕೂಗಳತೆ ದೂರದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪಬ್ಲಿಕ್ ಶಾಲೆ ಇದ್ದು, ಸಾವಿರಾರು ಬಡ ಕುಟುಂಬಗಳ ಮನೆಗೆ ಅಪಾಯವಿದೆ ಎಂದು ನೂರಾರು ಜನ ಸಾರ್ವಜನಿಕರು ಅಧಿಕಾರಿಗಳ ಮುಂದೆ ಆರೋಪಗಳ ಸುರಿಮಳೆ ಗೆರೆದಿದ್ದಾರೆ.
ಉಳಿದಂತೆ ಮಣ್ಣೂರ್ ತಿಮ್ಮನಹಳ್ಳಿ ಸರ್ವೆ ನಂಬರ್ 4ರ ಹಾಗೂ ತಂಗನಹಳ್ಳಿ ಸರ್ವೆ ನಂಬರ್ 32 ಸಿದ್ದಾಪುರ ಸರ್ವೆ ನಂಬರ್ 4ರಲ್ಲಿ ಆಸು ಪಾಸಿನಲ್ಲಿ ಪ್ರತಿಷ್ಠಿತ ಎಲೆರಾಂಪುರ ಕುಂಚಿಟಿಗ ಮಹಾಮಠ, ಎಲೆರಾಂಪುರ ದೊಡ್ಡಮಟ್ಟದ ಜಲಾಶಯ, ಹನುಮಂತಪುರದ ಶ್ರೀ ಲಕ್ಷ್ಮೀಶ್ವರ ಮಠ, ಎತ್ತಿನಹೊಳೆ ಡೈವೋರ್ಷನ್ ಪ್ರಮುಖ ಕೇಂದ್ರ , ಎಕ್ಸ್ ಪ್ರೆಸ್ ವೇ , ತಂಗನಹಳ್ಳಿ ಶ್ರೀ ಅನ್ನಪೂರ್ಣೇಶ್ವರಿ ಮಠ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಕೋಟ್ಯಂತರ ರೂಪಾಯಿ ವೆಚ್ಚದ ಎತ್ತಿನಹೊಳೆ ಕಾಮಗಾರಿ ಹಾಗೂ ಎಕ್ಸ್ ಪ್ರೆಸ್ ವೇ ಹಾಗೂ ಸರ್ಕಾರಿ ಶಾಲೆಗಳು ಸೇರಿದಂತೆ ಬಡ ಕುಟುಂಬಗಳು ಸಾವಿರಾರು ಮನೆಗಳು ಗಣಿಗಾರಿಕೆಯಿಂದ ಅಪಾಯವಗಲಿದ್ದು, ದಯಮಾಡಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ನೂರಾರು ಜನ ಸಾರ್ವಜನಿಕರು ಅಧಿಕಾರಿಗಳ ಸ್ಥಳ ಪರಿಶೀಲನ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿ ಗಣಿ ಧಣಿಗಳ ಈ ದೊಡ್ಡ ಮಟ್ಟದ ಗಣಿಗಾರಿಕೆ ಸಿದ್ಧತೆ ಕಳೆದ 15 ವರ್ಷಗಳಿಂದ ಸತತವಾಗಿ ಪ್ರಯತ್ನ ನಡೆಯುತ್ತಿದ್ದು, ಎರಡು ಬಾರಿ ಗಣಿಗಾರಿಕೆಯ ಪರ್ಮಿಷನ್ ರದ್ದಾಗಿ, ಮಠಮಾನ್ಯ ಸೇರಿದಂತೆ ಸಾರ್ವಜನಿಕರ ಸತತ ವಿರೋಧದ ನಡುವೆಯೂ ನಿಧಾನಗತಿಯಲ್ಲಿ ಹಠ ಬಿಡದ ಗಣಿಗಾರಿಕಾ ಮಾಲೀಕರು ಸೇರಿದಂತೆ ಅವರ ಹಿಂಬಾಲಕರು ಗಣಿಗಾರಿಕೆಗೆ ಸತತ ಪ್ರಯತ್ನ ಪಡುತ್ತಿದ್ದು, ಈಗ ಒಂದು ಅಂತಕ್ಕೆ ಗಣಿಗಾರಿಕೆ ಪ್ರಾರಂಭಕ್ಕೆ ಸಕಲ ಸಿದ್ಧತೆ ನಡೆದಿದ್ದು ಮುಂದಿನ ದಿನಗಳಲ್ಲಿ ಕೊರಟಗೆರೆ ಗಣಿಗಾರಿಕೆಯಲ್ಲಿ ಮಿನಿ ಬಳ್ಳಾರಿಯಾಗುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತದೆ.
