ಮುಂಬೈ:
ಮಹಾರಾಷ್ಟ್ರದ ಥಾಣೆಯಲ್ಲಿ ಭಾನುವಾರ ಭಾರೀ ಮಳೆಯಿಂದಾಗಿ ಜಲಾವೃತವಾದ ರೆಸಾರ್ಟ್ ನಲ್ಲಿ ಸಿಲುಕಿದ್ದ 49 ಜನರನ್ನು ಮತ್ತು ಪಾಲ್ಗಾಡ್ ನಲ್ಲಿ 16 ಗ್ರಾಮಸ್ಥರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಹಪುರ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ರೆಸಾರ್ಟ್‌ನಲ್ಲಿ ಸಿಲುಕಿದ್ದ ಜನರನ್ನು ದೋಣಿ ಮತ್ತು ಲೈಫ್ ಜಾಕೆಟ್‌ಗಳನ್ನು ಬಳಸಿ NDRF ತಂಡ ರಕ್ಷಿಸಿದೆ. ಅದೇ ರೀತಿ, ಮಧ್ಯಾಹ್ನ ಪಾಲ್ಘರ್ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದಿಂದ 16 ಗ್ರಾಮಸ್ಥರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾನ್ಸಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಹೆಚ್ಚಾದ ನಂತರ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ವಸೈನ ಸೈವಾನ್‌ನ ಚಾಲಿಸ್ಪಾಡಾದ ಗ್ರಾಮಸ್ಥರನ್ನು ರಕ್ಷಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ 8 ಮಹಿಳೆಯರು ಸೇರಿದಂತೆ 16 ಗ್ರಾಮಸ್ಥರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ.
ಮುಂಗಾರು ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈ, ಥಾಣೆ ಮತ್ತು ಪಾಲ್ಗಾಡ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
