ಬೆಂಗಳೂರು:
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರು ಬಂಧನ ಭೀತಿಯಿಂದ ಗುರುವಾರ ನಿರೀಕ್ಷಣಾ ಜಾಮೀನು ಕೋರಿ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಾಳೆಗೆ ಮುಂದೂಡಿದೆ.
ವಿಚಾರಣೆ ವೇಳೆ, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ನಿರೀಕ್ಷಣಾ ಜಾಮೀನು ಅರ್ಜಿ ಹೇಗೆ ಊರ್ಜಿತವಾಗುತ್ತದೆ. ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲಾ? ಎಂದು ಎಚ್.ಡಿ.ರೇವಣ್ಣ ಪರ ಹಿರಿಯ ವಕೀಲರಿಗೆ ವಿಶೇಷ ಕೋರ್ಟ್ ಪ್ರಶ್ನಿಸಿದೆ.
ವಿರುದ್ಧ ಎಸ್ಐಟಿ ಐಪಿಸಿ ಸೆಕ್ಷನ್ 376 ಅಡಿ(ಅತ್ಯಾಚಾರ ಆರೋಪ) ಅನ್ನು ಸೇರ್ಪಡೆ ಮಾಡಿದೆ. ಅಲ್ಲದೆ ರಾಜ್ಯದ ಗೃಹ ಸಚಿವರು ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದಾರೆ. ಹೀಗಾಗಿ ತಮ್ಮ ಕಕ್ಷಿದಾರರಿಗೆ ಬಂಧನದಿಂದ ರಕ್ಷಣೆ ನೀಡಬೇಕು ಮತ್ತು ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ತಕ್ಷಣ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಈ ಸಂಬಂಧ ಎಸ್ಐಟಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಬಹಿರಂಗಗೊಂಡ ನಂತರ, ಪ್ರಜ್ವಲ್ ಮತ್ತು ರೇವಣ್ಣ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.