ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ: ಡಿ.ಕೆ. ಶಿವಕುಮಾರ್

ಬೆಂಗಳೂರು

     ಮೇಕೆದಾಟು ಯೋಜನೆಗೆ  ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ  ಸಲ್ಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು. ವಿಧಾನಸೌಧದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಹಾಗೂ ಕಾವೇರಿ ನೀರಾವರಿ ನಿಗಮ ನಿರ್ದೇಶಕರ ಮಂಡಳಿ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು.

    ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆ ಮಾಡಲಾಗಿದೆ. ಇದಕ್ಕೆ ಮೊದಲು, ಮೇಕೆದಾಟು ಯೋಜನೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನಂತರ ಈ ಯೋಜನೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ. ಡಿಪಿಆರ್ ಅನ್ನು ಪರಿಷ್ಕರಿಸಿ ಸಲ್ಲಿಸಬೇಕಿದೆ. ಇದರಲ್ಲಿ ಯೋಜನೆ ಸಂಪೂರ್ಣ ವಿವರ, ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಮಾಹಿತಿ ನೀಡಬೇಕು. ಮೇಕೆದಾಟು ಯೋಜನೆ ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಮಂಡ್ಯಕ್ಕೆ ಹತ್ತಿರವಾಗುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಸಿಇ, ಸಿಸಿಎಫ್ ಅವರನ್ನೊಳಗೊಂಡ ಪ್ರತ್ಯೇಕ ಕಚೇರಿ ಆರಂಭಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿ ಒದಗಿಸಲು ತಯಾರು ಮಾಡಲಾಗುವುದು ಎಂದು ತಿಳಿಸಿದರು.

     ಮತ್ತೆ ಹೊಸದಾಗಿ ಡಿಪಿಆರ್ ಮಾಡಬೇಕೇ, ಇದನ್ನು ಜಲ ಆಯೋಗದ ಮುಂದೆ ಮಂಡಿಸುವಿರಾ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮಂಡಿಸುತ್ತೀರಾ ಎಂದು ಕೇಳಿದಾಗ, ʼಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ಅನ್ನು ಚಾಲ್ತಿ ದರಗಳಿಗೆ ಪರಿಷ್ಕರಿಸಿ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ಯಾರ ಮುಂದೆ ಮಂಡಿಸಬೇಕೋ ಅವರ ಮುಂದೆ ಮಂಡಿಸುತ್ತೇವೆʼ ಎಂದರು.ಮತ್ತೆ ದೆಹಲಿಗೆ ಪ್ರಯಾಣ ಬೆಳೆಸುವಿರಾ ಎಂದು ಕೇಳಿದಾಗ, ʼಸದ್ಯಕ್ಕೆ ದೆಹಲಿಗೆ ಹೋಗುವ ಯಾವ ಆಲೋಚನೆಯೂ ಇಲ್ಲʼ ಎಂದು ತಿಳಿಸಿದರು. 

     ತುಮಕೂರು ಮೆಟ್ರೋ ಮಾರ್ಗಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಳಿದಾಗ, ʼಅಲ್ಲಿನ ಜನಪ್ರತಿನಿಧಿಗಳು ನನ್ನ ಬಳಿ ಬಂದು ಮನವಿ ಮಾಡಿದಾಗ ನಾನು ಅದರ ಸಾಧ್ಯತೆಗಳ ಬಗ್ಗೆ ತಿಳಿಯಲು ಮುಂದಾಗಿದ್ದೇವೆ. ಇದರಲ್ಲಿ ಟೀಕೆ ಮಾಡುವಂತಹದ್ದು ಏನಿದೆ? ನಮ್ಮ ಗೃಹ ಸಚಿವರು ಸೇರಿದಂತೆ ಕೆಲವರು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರಾದರೂ ಬಂಡವಾಳ ಹಾಕಲು ಮುಂದೆ ಬರುತ್ತಾರಾ? ಬಂದರೆ ಯಾವೆಲ್ಲಾ ಮಾರ್ಗ ಇವೆ ಎಂದು ಅಧ್ಯಯನ ಮಾಡಬೇಕಿದೆ. ಯಾರಾದರೂ ಚಂದ್ರಲೋಕಕ್ಕೆ ಹೋಗಬೇಕು ಎಂದರೆ ಅದು ಸಾಧ್ಯವೇ, ಇಲ್ಲವೇ ಎಂದು ಪರಿಶೀಲಿಸಬೇಕಲ್ಲವೇʼ ಎಂದು ತಿಳಿಸಿದರು.‌ 

     ಎರಡನೇ ಏರ್‌ಫೋರ್ಟ್ ಬಗ್ಗೆ ಕೇಳಿದಾಗ, ʼಇದರ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದೇವೆ. ಕಾದು ನೋಡೋಣʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Recent Articles

spot_img

Related Stories

Share via
Copy link