ಮಧುಗಿರಿ:
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ನೀಡಿಕೆ ಪ್ರಮಾಣವನ್ನು 10 ಕೆ.ಜಿ ಗೆ ಏರಿಸುತ್ತೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ತಾಲ್ಲೂಕಿನ ಪುಲುಮಾಚಿ, ಶ್ರೀನಿವಾಸಪುರ, ಮಾಳಗೊಂಡನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲ್ಲೂಕಿನ ಗ್ರಾಮಗಳಲ್ಲಿ ಯುವಜನತೆ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳಲು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು. ಇದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕೇಳಲು ಯುವ ಜನತೆಗೆ ಹಕ್ಕು ಬಂದಂತಾಗುತ್ತದೆ. ಗ್ರಾಮದ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದರು.
ರೈತರ ಹಾಗೂ ಬಡ ಜನರ ಅಭಿವೃದ್ದಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆಯು ಮಹತ್ವ ಪೂರ್ಣ ಯೋಜನೆಯಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆ ಎಲ್ಲಾ ಜಾತಿಯ ಬಡವರ ನೆರವಿಗೆ ಬಂದಿದೆ ಎಂದರು.
ನನ್ನ ಅವಧಿಯಲ್ಲಿ ತಾಲ್ಲೂಕಿನ ಸವಾರ್ಂಗೀಣ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದು, ಮೂಲಭೂತ ಸೌಕರ್ಯ ವಂಚಿತ ಗ್ರಾಮಗಳನ್ನು ಗುರುತಿಸಿ ರಸ್ತೆ, ನೀರು ಸೇರಿದಂತೆ ಇನ್ನಿತರೆ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದೇನೆ. ಸಿದ್ದರಾಮಯ್ಯನವರು ತಾಲ್ಲೂಕಿಗೆ ಬಂದಿದ್ದ ಸಂದರ್ಭದಲ್ಲಿ ಅವರ ಮನವೊಲಿಸಿ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಶೂ ಭಾಗ್ಯ ಯೋಜನೆ ಜಾರಿಗೊಳಿಸುವಂತೆ ಮಾಡಿದ್ದೇನೆ. ಎಲ್ಲಾ ಜಾತಿಯ ಬಡವರ ಸಾಲ ಮನ್ನಾ ಮಾಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ. ರಾಜ್ಯ ಸಹಕಾರ ಮಹಾ ಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಪುರಸಭಾದ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಡಿ.ಹೆಚ್.ನಾಗರಾಜು, ಆರ್.ಎ. ನಾರಾಯಣ್, ಮೂಡ್ಲಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ರಾಜಗೋಪಾಲ್, ಎಂ.ಎಸ್. ಮಲ್ಲಿಕಾರ್ಜುನಯ್ಯ, ಐ.ಡಿ.ಹಳ್ಳಿ ಗ್ರಾ.ಪಂ ಅಧ್ಯಕ್ಷ ನರಸಿಂಹರೆಡ್ಡಿ,
ಚಿಕ್ಕಮಾಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ವಿ.ಆರ್.ಭಾಸ್ಕರ್, ಶನಿವಾರಂ ರೆಡ್ಡಿ, ಶ್ರೀನಿವಾಸರೆಡ್ಡಿ, ರಮೇಶ, ಕುಸುಮ ಕುಮಾರಿ, ಜಯಮ್ಮ, ಚಿತ್ತಯ್ಯ, ನಾಗರಾಜು, ಪಿ.ವಿ. ವೀರಭದ್ರ, ಬುಡ್ಡೀರಪ್ಪ, ನಾಗಣ್ಣ, ಪೂಜಾರ್ ತಮ್ಮಣ್ಣ ಹಾಗೂ ಮುಂತಾದವರು ಇದ್ದರು.ಪುಲುಮಾಚಿ, ಶ್ರೀನಿವಾಸಪುರ, ಮಾಳಗೊಂಡನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಸೇರಿದಂತೆ ಇತರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ