ನವದೆಹಲಿ:
ಇ-ಹರಾಜಿನಲ್ಲಿ ಭಾಗವಹಿಸದೆ ಭಾರತೀಯ ಆಹಾರ ನಿಗಮ(ಎಫ್‌ಸಿಐ)ದಿಂದ ನೇರವಾಗಿ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
“ರಾಜ್ಯಗಳು ಇ-ಹರಾಜಿನಲ್ಲಿ ಭಾಗವಹಿಸದೆಯೇ ಭಾರತೀಯ ಆಹಾರ ನಿಗಮದಿಂದ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ(ದೇಶೀಯ) ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 2,800 ರೂ.ಗೆ ಖರೀದಿಸಬಹುದು” ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹೊಸ ಖರೀದಿ ಅವಧಿಗೆ ಮುನ್ನ ಎಫ್‌ಸಿಐ ಗೋಡೌನ್‌ಗಳಲ್ಲಿರುವ ಬೃಹತ್ ಹೆಚ್ಚುವರಿ ದಾಸ್ತಾನುಗಳನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಕಳೆದ ವರ್ಷ ಇ-ಹರಾಜಿನಲ್ಲಿ ಭಾಗವಹಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ವಿಧಿಸಿತ್ತು. ಇದು ಕರ್ನಾಟಕ ಸರ್ಕಾರದ ಅಕ್ಕಿ ಖರೀದಿ ಮೇಲೆ ಪರಿಣಾಮ ಬೀರಿತ್ತು.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ, ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಈಡೇರಿಸಲು 2.34 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಅಕ್ಕಿಯ ಅಗತ್ಯವಿತ್ತು. ಅಕ್ಕಿ ದಾಸ್ತಾನು ಇದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿತ್ತು.
