ನವದೆಹಲಿ:
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದ ನಿಮಿತ್ತ ತಮ್ಮ ನಕಲಿ ಹೆಸರಿನಲ್ಲಿನ ಸೋಶಿಯಲ್ ಮೀಡಿಯಾ ಕಾಮೆಂಟ್ಗಳ ವಿರುದ್ಧ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಟಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಆಟಗಾರರ, ಪಾಕ್ ಆಟಗಾರರಿಗೆ ಹ್ಯಾಂಡ್ಶೇಕ್ ನೀಡಲು ನಿರಾಕರಿಸಿದ್ದರು.
ಈ ಪಂದ್ಯದ ಬಳಿಕ ರಿಕಿ ಪಾಂಟಿಂಗ್ ಅವರು ಸ್ಕೈ ಸ್ಪೋಟ್ಸ್ ಜೊತೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಕಾಮೆಂಟ್ಗಳಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಟೀಮ್ ಪಾಕಿಸ್ತಾನ ಎಂಬ ಹೆಸರಿನ ಪೇಜ್ವೊಂದು, ಪಾಂಟಿಂಗ್ ನೀಡಿದ್ದಾರೆಂಬ ಹೇಳಿಕೆಯನ್ನು ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಬಳಿಕ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ತಮ್ಮ ನಕಲಿ ಕಾಮೆಂಟ್ಗಳ ವಿರುದ್ಧ ಹರಿಹಾಯ್ದಿದ್ದಾರೆ.
“ಈ ಪಂದ್ಯ ಭಾರತವನ್ನು ದೊಡ್ಡ ಸೋತ ತಂಡವಾಗಿ ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ. ಪಾಕಿಸ್ತಾನ ತಂಡವು ಕೊನೆಯಲ್ಲಿ ಕೈಕುಲುಕಲು ಬಯಸಿದ ರೀತಿ ಅವರನ್ನು ಸಜ್ಜನರ ಆಟದ ಚಾಂಪಿಯನ್ಗಳಾಗಿ ಅಮರಗೊಳಿಸಿದೆ, ಭಾರತವು ಶಾಶ್ವತ ಸೋತ ತಂಡವಾಗಿದೆ,” ಎಂಬ ರಿಕಿ ಪಾಂಟಿಂಗ್ ನೀಡಿದ್ದಾರೆಂಬ ಹೇಳಿಕೆಯನ್ನು ಟೀಮ್ ಪಾಕಿಸ್ತಾನ ಪೋಸ್ಟ್ ಹಾಕಿತ್ತು.
ಇದನ್ನು ಗಮನಿಸಿದ ರಿಕಿ ಪಾಟಿಂಗ್, ನಾನು ಈ ರೀತಿ ಹೇಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಏಷ್ಯಾ ಕಪ್ ಟೂರ್ನಿಗೆ ಸಂಬಂಧಿಸಿದಂತೆ ನಾನು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇದು ಸುಳ್ಳು ಹೇಳಿಕೆ ಎಂದು ಆಸೀಸ್ ದಿಗ್ಗಜ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
“ಸಾಮಾಜಿಕ ಮಾಧ್ಯಮದಲ್ಲಿ ನನ್ನ ಮೇಲೆ ಕೆಲವು ಕಾಮೆಂಟ್ಗಳು ಬರುತ್ತಿವೆ ಎಂದು ನನಗೆ ತಿಳಿದಿದೆ. ನಾನು ಆ ಹೇಳಿಕೆಗಳನ್ನು ಸ್ಪಷ್ಟವಾಗಿ ನೀಡಿಲ್ಲ ಮತ್ತು ಏಷ್ಯಾ ಕಪ್ ಬಗ್ಗೆ ಯಾವುದೇ ಸಾರ್ವಜನಿಕ ಕಾಮೆಂಟ್ಗಳನ್ನು ಮಾಡಿಲ್ಲ ಎಂದು ದಯವಿಟ್ಟು ತಿಳಿದುಕೊಳ್ಳಿ,” ಎಂದು ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ತಿಳಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಈ ಹಿಂದೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕದಿದ್ದರೆ ಏಷ್ಯಾ ಕಪ್ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಇಬ್ಬರು ನಾಯಕರ ನಡುವಿನ ಸಾಂಪ್ರದಾಯಿಕ ಹಸ್ತಲಾಘವವನ್ನು ತಡೆಯಲು ಟಾಸ್ನಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ಪಿಸಿಬಿ ಆರೋಪಿಸಿತು. ಸೋಮವಾರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಪತ್ರ ಬರೆದು ಪೈಕ್ರಾಫ್ಟ್ ಅವರನ್ನು ಟೂರ್ನಿಯ ಇನ್ನುಳಿದ ಭಾಗದಿಂದ ತೆಗೆದುಹಾಕುವಂತೆ ಕೋರಿದ್ದರು ಎಂದು ದೃಢಪಡಿಸಿದರು. ಆದಾಗ್ಯೂ, ತನಿಖೆ ನಡೆಸಿದ ನಂತರ ಐಸಿಸಿ ಮನವಿಯನ್ನು ತಿರಸ್ಕರಿಸಿತು ಮತ್ತು ಪಿಸಿಬಿಗೆ ತನ್ನ ನಿರ್ಧಾರವನ್ನು ಔಪಚಾರಿಕವಾಗಿ ತಿಳಿಸಿತು.
