ಉತ್ತರ ಪ್ರದೇಶದ ಮೂಲ ಶಿಕ್ಷಣ ಅಧಿಕಾರಿಯಾಗಿ ರಿಂಕು ಸಿಂಗ್ ನೇಮಕ ಸಾಧ್ಯತೆ!

ನವದೆಹಲಿ:

     ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್ ರಿಂಕು ಸಿಂಗ್  ಅವರನ್ನು ಉತ್ತರ ಪ್ರದೇಶದ, ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಆಗಿ ನೇಮಿಸಲು ಸಿದ್ಧತೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅಂತಾರಾಷ್ಟ್ರೀಯ ಪದಕ ವಿಜೇತರ ನೇರ ನೇಮಕಾತಿ ನಿಯಮಗಳು-2022 ರ ಅಡಿಯಲ್ಲಿ ಅವರನ್ನು ಈ ಹುದ್ದೆಗೆ ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎನ್ನಲಾಗಿದೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ಮೂಲಭೂತ ಶಿಕ್ಷಣ ನಿರ್ದೇಶಕರಿಗೆ ಪತ್ರವನ್ನೂ ನೀಡಲಾಗಿದೆ. ರಿಂಕು ಸಿಂಗ್ ಅವರನ್ನು ಈ ಹುದ್ದೆಗೆ ನೇಮಕ ಮಾಡಿರುವುದು ಯುಪಿ ಸರ್ಕಾರದ ನೀತಿಯ ಒಂದು ಭಾಗವಾಗಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸರ್ಕಾರಿ ಸೇವೆಗಳಲ್ಲಿ ಸ್ಥಾನಗಳನ್ನು ನೀಡುವ ಮೂಲಕ ಅವರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಈಗಾಗಲೇ ರಿಂಕು ಸಿಂಗ್‌ ಜತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

   ಸಾಮಾನ್ಯ ಹಿನ್ನೆಲೆಯಿಂದ ಬಂದ ರಿಂಕು ಸಿಂಗ್, ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ತಮ್ಮ ಪ್ರದರ್ಶನದ ಮೂಲಕ ಬೇಗನೆ ಜನಪ್ರಿಯತೆ ಗಳಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ರಿಂಕು ಸಿಂಗ್, ಐಪಿಎಲ್ ನಲ್ಲಿ ಯಶ್ ದಯಾಳ್ ವಿರುದ್ಧ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಗಳನ್ನು ಬಾರಿಸುವ ಮೂಲಕ ಖ್ಯಾತಿ ಗಳಿಸಿದ್ದರು. ಇದಾದ ಬಳಿಕ ಭಾರತ ತಂಡಕ್ಕೂ ಪದಾರ್ಪಣೆ ಮಾಡಿ ಹಲವು ಸಾಧನೆ ಮಾಡಿದ್ದಾರೆ.

   ಐಪಿಎಲ್‌ನಲ್ಲಿ ಆಡಿರುವ 59 ಪಂದ್ಯಗಳೊಂದಿಗೆ, ರಿಂಕು 1,099 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಸರಾಸರಿ 30.52 ರನ್‌ಗಳನ್ನು ಹೊಂದಿದ್ದಾರೆ. ಭಾರತ ಪರ ಎರಡು ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ ಕೇವಲ 55 ರನ್ ಗಳಿಸಿದ್ದರು. ಟಿ20ಯಲ್ಲಿ 46.1ರ ಸರಾಸರಿಯಲ್ಲಿ 546 ರನ್ ಗಳಿಸಿದ್ದರು. ಶಾರ್ಟ್ ಫಾರ್ಮೆಟ್ ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ. 

   ಇತ್ತೀಚೆಗಷ್ಟೇ ರಿಂಕು ಸಿಂಗ್‌ ಅವರು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್‌ 8 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಅದ್ಧೂರಿ ಸಮಾರಂಭ ನಡೆದಿತ್ತು. ಮುಂದಿನ ವರ್ಷ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ನವೆಂಬರ್ 19, 2025 ರಂದು ವಿವಾಹ ನಡೆಯಬೇಕಿತ್ತು. ಆದರೆ ಈ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಇರುವ ಕಾರಣ ವಿವಾಹವನ್ನು ಮುಂದೂಡಲಾಯಿತು.

Recent Articles

spot_img

Related Stories

Share via
Copy link