ಬೆಂಗಳೂರು :
‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದ ಗೌರವ, ಐಶ್ವರ್ಯ ಮತ್ತು ಅವಕಾಶಗಳನ್ನು ತಂದುಕೊಂಡಿದೆ. ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ ಚಾಪ್ಟರ್ 1’ ಸಿನಿಮಾದ ನಿರ್ದೇಶನ ಮತ್ತು ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಪರಭಾಷೆಗಳಿಂದಲೂ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ದೊಡ್ಡ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ತೆಲುಗಿನ ‘ಜೈ ಹನುಮಾನ್’ ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಅದರ ಜೊತೆಗೆ ಬಾಲಿವುಡ್ ಸಿನಿಮಾದ ಅವಕಾಶವೂ ರಿಷಬ್ಗೆ ಬಂದಿದ್ದು, ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.
ತೆಲುಗಿನಲ್ಲಿ ಫ್ಯಾಂಟಸಿ ಸಿನಿಮಾ ಆಗಿರುವ ‘ಜೈ ಹನುಮಾನ್’ನಲ್ಲಿ ಆಂಜನೇಯನ ಪಾತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ, ಹಿಂದಿ ಸಿನಿಮಾದಲ್ಲಿ ಛತ್ರಪತಿ ಶಿವಾಜಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಒಂದು ಪೋಸ್ಟರ್ ಈ ಹಿಂದೆಯೇ ಬಿಡುಗಡೆ ಆಗಿತ್ತು. ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆ ಆಗಿದೆ.
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಶಿವಾಜಿ ಮಹಾರಾಜ ಪಾತ್ರಧಾರಿ ರಿಷಬ್ ಶೆಟ್ಟಿ ದೇವಿಯ ಬೃಹತ್ ವಿಗ್ರಹದ ಮುಂದೆ ನಿಂತಿರುವ ಚಿತ್ರವಿದೆ. ಶಿವಾಜಿ ಮಹಾರಾಜರ 395ನೇ ಜಯಂತಿಯ ಪ್ರಯುಕ್ತ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ದೇಶನ ಮಾಡಲಿದ್ದು, ಗಟ್ಟಿ ತಂಡವನ್ನೇ ಜೊತೆಗೆ ಕಟ್ಟಿಕೊಂಡಿದ್ದಾರೆ. ಹಲವು ರಾಷ್ಟ್ರಪ್ರಶಸ್ತಿ ವಿಜೇತರು ಮತ್ತು ಆಸ್ಕರ್ ವಿಜೇತರು ಸಹ ಚಿತ್ರತಂಡದಲ್ಲಿ ಇದ್ದಾರೆ. ಆಸ್ಕರ್ ವಿಜೇತ ರಸೂಲ್ ಪೂಕಟ್ಟಿ ಸೌಂಡ್ ಡಿಸೈನ್ ಮಾಡಲಿದ್ದಾರೆ. ಗೀತ ಸಾಹಿತಿ ಪ್ರಸೂನ್ ಜೋಶಿ, ಸಿನಿಮಾಟೊಗ್ರಾಫರ್ ರವಿವರ್ಮಾ, ಆಕ್ಷನ್ ನಿರ್ದೇಶನವನ್ನು ಹಾಲಿವುಡ್ನ ಕ್ರೇಗ್, ಎಡಿಟಿಂಗ್ ಫಿಲೋಮಿನ್ ರಾಜ, ಸಂಗೀತವನ್ನು ಪ್ರೀತಮ್ ನೀಡಲಿದ್ದಾರೆ ಇನ್ನಿತರೆ ಪ್ರತಿಭಾವಂತರು ಈ ಸಿನಿಮಾಕ್ಕೆ ಕೆಲಸ ಮಾಡಲಿದ್ದಾರೆ.
‘ಕಾಂತಾರ 2’ ಸಿನಿಮಾದ ಬಳಿಕ ‘ಶಿವಾಜಿ’ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಈ ಸಿನಿಮಾ 2027ರ ಜನವರಿ 21ಕ್ಕೆ ಬಿಡುಗಡೆ ಆಗಲಿದೆ. ರಿಷಬ್ ಶೆಟ್ಟಿಯವರು ಶಿವಾಜಿ ಕುರಿತಾದ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆಲ್ಲ ಸೊಪ್ಪು ಹಾಕದ ರಿಷಬ್ ಶೆಟ್ಟಿ, ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮೇಲೆ ನೂರು ಕೋಟಿಗೂ ಹೆಚ್ಚು ಬಜೆಟ್ ಹಾಕಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೆ ಶಿವಾಜಿಯ ಪುತ್ರ ಸಾಂಬಾಜಿಯ ಕುರಿತಾದ ಕತೆಯನ್ನು ‘ಛಾವಾ’ ಹೆಸರಲ್ಲಿ ಸಿನಿಮಾ ಮಾಡಲಾಗಿದ್ದು, ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ‘ಛಾವಾ’ ಸಿನಿಮಾ ಯಶಸ್ಸಿನ ಬೆನ್ನಲ್ಲೆ ಶಿವಾಜಿ ಸಿನಿಮಾದ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿದೆ.
