ಬೆಂಗಳೂರು:
ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆ ಅಪಾಯಕಾರಿ ಎಂಬ ಅರಿವಿದ್ದರೂ ನಿರ್ಲಕ್ಷ್ಯದಿಂದಾಗಿ ಇತ್ತೀಚೆಗೆ ಅಪಘಾತ, ಸಾವು-ನೋವು ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 51 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನ ಸಾವಿಗೀಡಾಗಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ನಿಯಮಗಳ ಉಲ್ಲಂಘನೆ, ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜೀವಗಳು ಸಾವನ್ನಪ್ಪಿವೆ. ಇದು ಇತ್ತೀಚೆಗೆ ಸಂಭವಿಸಿದ ಅತೀ ಹೆಚ್ಚಿನ ಸಾವುನೋವಿನ ಪ್ರಕರಣವಾಗಿದೆ. ಇವುಗಳಲ್ಲಿ ಹೆಚ್ಚಿನವು ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿವೆ. ರಸ್ತೆ ಸುರಕ್ಷತೆಗೆ ಎಲ್ಲರೂ ಜವಾಬ್ದಾರಿಯುತ ನಡವಳಿಕೆ ತೋರಬೇಕು’ ಎಂದು ಮನವಿ ಮಾಡಿದ್ದಾರೆ.
ಭಾನುವಾರ ಚಿಕ್ಕೋಡಿ, ಹಾಸನ, ಉತ್ತರ ಕನ್ನಡ ಹಾಗೂ ರಾಮನಗರ ಸೇರಿ ರಾಜ್ಯದ ಹಲವೆಡೆ ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಜೊತೆಗೆ ದೇಶದ ಹಲವು ಕಡೆಗಳಲ್ಲೂ ಅಪಘಾತಗಳು ನಡೆದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.