ಬೆಂಗಳೂರು:
ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯು ಸುಮಾರು 700 ಕೋಟಿ ರೂಪಾಯಿ ವೆಚ್ಚದ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುರುವಾರ ಟೆಂಡರ್ ಕರೆಯಲಾಗುತ್ತದೆ. 21 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ 2025ರ ಜನವರಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಬಾರಿ ಬಿಬಿಎಂಪಿಯು ವಲಯವಾರು ಬಜೆಟ್ ಮಂಡನೆ ಮಾಡಲು ನಿರ್ಧರಿಸಲಾಗಿದ್ದು, ಆದಾಯ ಸಂಗ್ರಹಣೆ, ಅಂದಾಜುಗಳು ಮತ್ತು ಮಾಡಬೇಕಾದ ಕಾಮಗಾರಿಗಳ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲಾಗುತ್ತದೆ. ಇಲ್ಲಿಯವರೆಗೆ ಆಸ್ತಿ ತೆರಿಗೆ ರೂಪದಲ್ಲಿ 3,751 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ನವೆಂಬರ್ ಅಂತ್ಯದ ವೇಳೆಗೆ 4,000 ಕೋಟಿ ತಲುಪುವ ಗುರಿ ಹೊಂದಲಾಗಿದೆಯ ನಂತರದ ನಾಲ್ಕು ತಿಂಗಳಲ್ಲಿ ಆರ್ಥಿಕ ವರ್ಷದ ಗುರಿ ರೂ.5,200 ಕೋಟಿಯನ್ನು ಮುಟ್ಟಲು ಪ್ರಯತ್ನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಲಾಗಿರುವ ಒಟಿಎಸ್ ಯೋಜನೆಯ ಕೊನೆಯ ದಿನಗಳಲ್ಲಿ ನಾಗರಿಕರು ಅದರ ಉಪಯೋಗ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಡಿಸೆಂಬರ್ 1ರಿಂದ ಸುಮಾರು ಎರಡು ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ಒಟಿಎಸ್ ಯೋಜನೆ ಅವಧಿಯನ್ನು ವಿಸ್ತರಿಸುವುದಿಲ್ಲ. ಹೀಗಾಗಿ, ಆಸ್ತಿ ಮಾಲೀಕರು ಕೊನೆಯ ದಿನಕ್ಕಾಗಿ ಕಾಯದೆ ಈಗಲೇ ಪಾವತಿಸಬೇಕು. ಆನ್‌ಲೈನ್‌ನಲ್ಲಿ ಸಮಸ್ಯೆಯಾದರೆ ಸಹಾಯಕ ಕಂದಾಯ ಆಯುಕ್ತರ (ಎಆರ್‌ಒ) ಕಚೇರಿಯಲ್ಲಿ ಡಿಡಿ ಅಥವಾ ಚೆಕ್ ನೀಡಿ ಪಾವತಿ ಮಾಡಬಹುದು ಎಂದರು.
ಇತ್ತೀಚೆಗೆ ರಾಜಾಜಿನಗರದಲ್ಲಿ ಮರ ಬಿದ್ದು ಬಿಬಿಎಂಪಿ ಟ್ರಕ್ ಚಾಲಕ ಮೃತಪಟ್ಟ ಘಟನೆ ಕುರಿತು ಪ್ರತಿಕ್ರಿಯಿಸಿ, ಸಂತ್ರಸ್ತನ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ನೀಡಲಾಗುತ್ತದೆ, ವಲಯ ಆಯುಕ್ತರ ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.ನಮ್ಮ ಕ್ಲಿನಿಕ್ ಕುರಿತು ಮಾತನಾಡಿ, 2022-23ರ ಬಜೆಟ್‌ನಲ್ಲಿ ಸಮಗ್ರ ಆರೋಗ್ಯ ರಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆಯುರ್ವೇದ ಮತ್ತು ಯೋಗದಂತಹ ಪರಿಕಲ್ಪನೆಗಳನ್ನು ಸೇರಿಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.