ಮಧುಗಿರಿ
ದ್ವಿಚಕ್ರ ವಾಹನ ಸವಾರರಿಗೆ ನಿರಂತರ ತಪ್ಪದ ಪ್ರಾಣ ಭೀತಿ
ಪಟ್ಟಣದಲ್ಲಿ ಹಾದು ಹೋಗಿರುವ ಕೆಲ ಪ್ರಮುಖ ಡಾಂಬರ್ ರಸ್ತೆಗಳೆಲ್ಲಾ ಈಗ ಗುಂಡಿಗಳಿಂದ ಕೂಡಿದ್ದು, ಇವು ಟಾರ್ ರಸ್ತೆಗಳೊ ಅಥವಾ ಗುಂಡಿಗಳಿಂದ ಕೂಡಿರುವ ಕಪ್ಪು ಮಣ್ಣಿನ ಕಚ್ಛಾ ರಸ್ತೆಗಳೊ ಎಂಬುದು ನಾಗರಿಕರಿಗೆ ತಿಳಿಯದಾಗಿದೆ.
ಪುರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಕೆಲಸ ನಡೆಯುತ್ತಿದ್ದು, ಡಾಂಬರೀಕರಣಗೊಂಡ ರಸ್ತೆಗಳನ್ನೆಲ್ಲ ಕಿತ್ತು ಹಾಕಿರುವುದರಿಂದ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಜಲ್ಲಿ ಕಲ್ಲುಗಳು ರಸ್ತೆಯಲ್ಲೆಲ್ಲ ಹರಡಿಕೊಂಡಿದ್ದು ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಆಯತಪ್ಪಿ ಕೆಳಗೆ ಬಿದ್ದು ಗಾಯಗಳಾಗುವುದರ ಜೊತೆಗೆ ಪ್ರಾಣಗಳನ್ನು ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಮಧುಗಿರಿ- ತುಮಕೂರು ರಸ್ತೆಯಲ್ಲಿರುವ ದಂಡಿನ ಮಾರಮ್ಮನ ದೇವಾಲಯದ ಮುಂಭಾಗ ಹಾಗೂ ನ್ಯಾಯಾಲಯಗಳ ಸಂಕೀರ್ಣದ ಮುಂಭಾಗ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಹಗಲಿನ ವೇಳೆಯಲ್ಲೇನೋ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಾರೆ. ಆದರೆ ರಾತ್ರಿ ವೇಳೆಯಲ್ಲಂತೂ ರಸ್ತೆಯಲ್ಲಿ ಬೀದಿ ದೀಪವೂ ಇಲ್ಲ ವಾಗಿದ್ದು, ಗುಂಡಿ ಬಿದ್ದಿದ್ದು ಹತ್ತಿರಕ್ಕೆ ಬರುವಷ್ಟರಲ್ಲಿ ದ್ವಿಚಕ್ರ ವಾಹನ ಸವಾರರು ಆಯಾ ತಪ್ಪಿ ನೆಲಕ್ಕೆ ಉರುಳಿ ಬಿದ್ದು, ಗಾಯಗೊಂಡಿರುವ ಘಟನೆಗಳು ಈಗಾಗಲೇ ಎಷ್ಟೋ ನಡೆದಿವೆ. ಸಮೀಪದಲ್ಲಿಯೇ ಪುರಸಭಾಧ್ಯಕ್ಷ ತಿಮ್ಮರಾಜು ಅವರ ಮನೆಯಿದ್ದು, ನ್ಯಾಯಾಧೀಶರುಗಳು ಸಹ ಈ ಭಾಗದಲ್ಲಿ ವಾಸವಾಗಿದ್ದು, ಈ ರಸ್ತೆಗಳ ಅವ್ಯವಸ್ಥೆ ಬಗ್ಗೆ ಯಾರಿಗೆ ಹೇಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರಿಗೆ ಪ್ರಶ್ನೆಯಾಗಿ ಉಳಿದಿದೆ.
ಇತ್ತೀಚೆಗೆ ಮಾಜಿ ಪ್ರಧಾನಿ ದೇವೆಗೌಡರು ಮಧುಗಿರಿಗೆ ಎಂಎಲ್ಸಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದಾಗ ಸಂಬಂಧಪಟ್ಟ ಇಲಾಖೆಗಳು ಗುಂಡಿಗಳಿಗೆ ತೇಪೆ ಹಾಕುವ ಕೆಲಸವನ್ನು ಮಾಡಿ ಕೈ ತೊಳೆದುಕೊಂಡಿದ್ದವು. ಇನ್ನಾದರೂ ವಾಹನ ಸವಾರರ ಪ್ರಾಣ ಹಾನಿ ಆಗುವ ಮುಂಚೆ ಈ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








