ದುಬೈ:
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ. ಮಾರ್ಚ್ 9 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಮಾತ್ರ ಹಿಟ್ಮ್ಯಾನ್ ಟೀಮ್ ಇಂಡಿಯಾ ಜೊತೆ ಮುಂದುವರೆಯುವ ಸಾಧ್ಯತೆಯಿದೆ. ಇಲ್ಲದಿದ್ದರೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಪಂದ್ಯವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅದರಲ್ಲೂ ಮುಂಬರುವ ಏಕದಿನ ಸರಣಿಗೂ ಮುನ್ನ ಹೊಸ ನಾಯಕನನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಇದೇ ಕಾರಣದಿಂದಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಯುವ ಆಟಗಾರ ಶುಭ್ಮನ್ ಗಿಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ತಂಡದ ನಾಯಕ ರೋಹಿತ್ ಶರ್ಮಾ ಅವರ ವಯಸ್ಸು 37 ವರ್ಷ. ಅವರು ಇನ್ನೆರಡು ವರ್ಷ ಭಾರತ ತಂಡದಲ್ಲಿರುವುದು ಅನುಮಾನ. ಅದರಲ್ಲೂ 39ನೇ ವಯಸ್ಸಿನಲ್ಲಿ ಅವರು 2027 ಏಕದಿನ ವಿಶ್ವಕಪ್ ಆಡುವುದು ಡೌಟ್ ಎಂದೇ ಹೇಳಬಹುದು. ಆದರೆ ಅದುವರೆಗೆ ಅವರನ್ನು ಮುಂದುವರೆಸಬೇಕಿದ್ದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಿರ್ಣಾಯಕ.
ಒಂದು ವೇಳೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ತಂಡ ಗೆದ್ದರೆ ರೋಹಿತ್ ಶರ್ಮಾ ಅವರ ನಿವೃತ್ತಿ ಮತ್ತಷ್ಟು ಮುಂದಕ್ಕೆ ಹೋಗಬಹುದು. ಅಥವಾ ಅವರು ತಮ್ಮ ಏಕದಿನ ನಿವೃತ್ತಿಯನ್ನು ಪ್ರಕಟಿಸಬಹುದು. ಇತ್ತ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರ ಮೇಲೆ ಮೃದು ಧೋರಣೆ ತಳೆಯಬೇಕಿದ್ದರೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕು.
ಒಂದು ವೇಳೆ ಟೀಮ್ ಇಂಡಿಯಾ ಫೈನಲ್ನಲ್ಲಿ ಸೋತರೆ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಿಂದ ಕೈ ಬಿಡುವುದು ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಭಾನುವಾರ ದುಭೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಹಣಾಹಣಿಯು ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅವರ ಭವಿಷ್ಯವನ್ನು ನಿರ್ಧರಿಸಲಿದೆ ಎಂದೇ ಹೇಳಬಹುದು.
ಇನ್ನು ಭಾನುವಾರ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಈ ಹಿಂದೆ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಹಾಗಾಗಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಬಳಿಕ 37 ವರ್ಷದ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಿಸುತ್ತಾರಾ ಎಂಬುದನ್ನು ಸಹ ಕಾದು ನೋಡಬೇಕಿದೆ.
