ದುಬೈ
ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಏಕದಿನ ಸರಣಿಗೂ ಮುನ್ನ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ನಂ. 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಪಂದ್ಯಗಳನ್ನು ಆಡದ ಕಾರಣ ಅವರ ರೇಟಿಂಗ್‌ನಲ್ಲಿ ಕುಸಿತ ಕಂಡಿತು. ಇದರಿಂದಾಗಿ ರಾಂಚಿಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳ ಮೊದಲು ರೋಹಿತ್ ಮೊದಲ ಸ್ಥಾನಕ್ಕೇರಿದರು. ಸದ್ಯ ರೋಹಿತ್ 781 ರೇಟಿಂಗ್ ಅಂಕ ಹೊಂದಿದ್ದಾರೆ. 766 ಅಂಕ ಪಡೆದಿರುವ ಡ್ಯಾರಿಲ್ ಮಿಚೆಲ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ವೇಳೆ ರೋಹಿತ್ ಅಗ್ರಸ್ಥಾನಕ್ಕೇರಿದ್ದರು. ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್(745) ಮತ್ತು ವಿರಾಟ್ ಕೊಹ್ಲ(725) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
ವಿಂಡೀಸ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿವೀಸ್ ಎಡಗೈ ಬ್ಯಾಟರ್‌ಗಳಾದ ರಚಿನ್ ರವೀಂದ್ರ ಒಂದು ಸ್ಥಾನ ಏರಿಕೆಯಾಗಿ 12 ನೇ ಸ್ಥಾನಕ್ಕೆ ತಲುಪಿದ್ದಾರೆ. ಡೆವೊನ್ ಕಾನ್ವೇ ಬರೋಬ್ಬರಿ 11 ಸ್ಥಾನಗಳ ಜಿಗಿತದೊಂದಿಗೆ 31ನೇ ಸ್ಥಾನಕ್ಕೆ ತಲುಪಿದ್ದಾರೆ. ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಎಂಟನೇ ಸ್ಥಾನಕ್ಕೆ ಏರಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಯಾವುದೇ ದೊಡ್ಡ ಬಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್(710), ಜೋಫ ಆರ್ಚರ್(670) ಮತ್ತು ಕೇಶವ್ ಮಹಾರಾಜ್(660) ಕ್ರಮವಾಗಿ ಅಗ್ರ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಜ್ಮತುಲ್ಲಾ ಒಮರ್ಜಾಯ್(334) ಮೊದಲ ಸ್ಥಾನದಲ್ಲಿದ್ದಾರೆ.








