ಶಿರಸಿ :
ರೈತರ ಜಮೀನನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನುಕೂಲವಾಗುವಂತಹ ಕಾಮಗಾರಿಗಳನ್ನು ನೀಡುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ” ರೋಜಗಾರ್ ದಿನ” ಕೈಗೊಂಡು ಕೂಲಿಕಾರರಿಗೆ ಯೋಜನೆಯ ಸದುಪಯೋಗ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ಯಾಗದ್ದೆಯಲ್ಲಿ ನರೇಗಾದಡಿ ಕೈಗೊಂಡ ಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಜಲ ಮೂಲಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ ಕಾಲುವೆ ಹಾಗೂ ಟ್ರೆಂಚ್, ಇಂಗುಗುಂಡಿಯಂತಹ ಕಾಮಗಾರಿಗಳನ್ನು ಹೆಚ್ಚೆಚ್ಚಾಗಿ ಕೈಗೊಳ್ಳಬೇಕು ಇದರಿಂದ ನೀರಿನ ಭಾದತೆಯನ್ನು ತಡೆಯಲು ಸಾಧ್ಯ ಎಂಬುದನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರೀತಿ ಶೆಟ್ಟಿ ತಿಳಿಸಿದರು.ಸ್ಥಳೀಯ ರೈತರಾದ ಸತೀಶ್ ಹೆಗಡೆ ಅವರು ಹೇಳುವಂತೆ ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ನಮ್ಮ ಹೊಲಗಳಲ್ಲಿ ನೀರು ನುಗ್ಗಿ ಜಮೀನು ಹಾಳಾಗುತ್ತಿತ್ತು. ನರೇಗಾದಡಿ ಕಾಲುವೆ ನಿರ್ಮಾಣ ಮಾಡಿದ್ದರಿಂದ ಈ ವರ್ಷ ಎಷ್ಟೇ ಮಳೆ ಬಂದರೂ ನಮ್ಮ ಜಮೀನಿಗೆ ಯಾವುದೇ ಹನಿಯಾಗುತ್ತಿಲ್ಲ ಇದರಿಂದ ನಾವೆಲ್ಲರೂ ತೃಪ್ತರಾಗಿದ್ದೇವೆ ಎಂದರು.
ಇಲ್ಲಿ 2024-25ನೇ ಸಾಲಿನಲ್ಲಿ 3ಲಕ್ಷ ರೂ ವೆಚ್ಚದಲ್ಲಿ ಒಂದು ಕಾಲುವೆ ಹಾಗೂ 2ಲಕ್ಷ ರೂ ವೆಚ್ಚದಲ್ಲಿ ಒಂದು ಕಾಲುವೆ ನಿರ್ಮಾಣವಾಗಿದ್ದು ಸುತ್ತಲಿನ ರೈತರ ಜಮೀನುಗಳಿಗೆ ನೀರು ನುಗ್ಗದಂತೆ ಅನುಕೂಲ ಕಲ್ಪಿಸಿದೆ. ಜೊತೆಗೆ ಸುತ್ತಲಿನ ಗ್ರಾಮಸ್ಥರು ಇದರಿಂದ ಕೂಲಿ ಪಡೆಯಲು ಸಹ ಸಹಕಾರಿಯಾಗಿದೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಘುಪತಿ ನಾಯ್ಕ, ತಾಂತ್ರಿಕ ಸಂಯೋಜಕರಾದ ಕಾರ್ತಿಕ್ ಹಬ್ಬು, ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ, ಪಂಚಾಯತ್ ಸಿಬ್ಬಂದಿಗಳು ಇದ್ದರು.
