ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ : ಕನಸು ನನಸಾಗುವತ್ತ ಹೆಜ್ಜೆ

 ಮಧುಗಿರಿ : 

      ಮೊನೊಲಿಥಿಕ್ ಪ್ರಭೇದಕ್ಕೆ ಸೇರಿದ ಏಕ ಶಿಲೆಯಿಂದ ಪ್ರಕೃತಿ ದತ್ತ್ತವಾಗಿ ನಿರ್ಮಾಣವಾಗಿರುವ ಸುಮಾರು 232 ಎಕರೆ ವಿಸ್ತೀರ್ಣದ 1192 ಮೀಟರ್ ಎತ್ತರದ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಲು ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಲು ಉದ್ದೇಶಿಸಿ ಬೆಟ್ಟದ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ಮುಂದಾಗಿರುವುದು ತಾಲ್ಲೂಕಿನ ಜನತೆಯಲ್ಲಿ ಮಂದಹಾಸ ಮೂಡಿದ್ದು ಬಹುದಿನಗಳ ಬೇಡಿಕೆಯ ಕನಸೊಂದು ನನಸಾಗುವತ್ತ ಸಾಗಿದೆ.

       ರಾಜ್ಯ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ರಾಜ್ಯದ ಕೆಲ ತಾಣಗಳನ್ನು ಪ್ರವಾಸಿ ಕೇಂದ್ರವನ್ನಾಗಿಸಲು ಪ್ರವಾಸೋದ್ಯಮ ಇಲಾಖೆಯ 9 ತಾಣಗಳಲ್ಲಿ ಮಧುಗಿರಿಯ ಏಕಶಿಲಾ ಬೆಟ್ಟವು ಸ್ಥಾನ ಪಡೆದುಕೊಂಡಿದೆ. ಮಾಜಿ ಶಾಸಕ ಕೆ .ಎನ್. ರಾಜಣ್ಣ ಹಾಗೂ ಶಾಸಕ ವೀರಭದ್ರಯ್ಯ, ವಿವೇಕ ಜಾಗೃತ ಬಳಗ, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಸೇರಿದಂತೆ ಮತ್ತಿತರರ ಶ್ರಮದ ಫಲವಾಗಿ ಏಕಶಿಲಾ ಬೆಟ್ಟಕ್ಕೆ ರೋಪ್‍ವೇ ಮಂಜೂರಾಗಿದೆ.

ಇತಿಹಾಸ :

       ತುಂಬೆಯೂರು ಜಿಲ್ಲೆಯಲ್ಲಿನ, ಸಮುದ್ರ ಮಟ್ಟದಿಂದ 3930 ಅಡಿ ಎತ್ತರದ, ಬೆಂಗಳೂರಿನಿಂದ ನೂರು ಕಿಲೋಮೀಟರ್ ದೂರದಲ್ಲಿರುವ, ಈ ಹಿಂದೆ ಮದ್ಗಿರಿ, ಮದ್ದಗಿರಿ, ಪ್ರಸನ್ನಗಿರಿ, ಫತೆಹಬಾದ್, ಮಾದವಗಿರಿ, ಕೃಷ್ಣಗಿರಿಯಾಗಿದ್ದ ಮದ್ದಗಿರಿಯನ್ನು 31 ಅಕ್ಟೋಬರ್ 1927ರಲ್ಲಿ `ಕನ್ನಡದ ಆಸ್ತಿ’ ಮಾಸ್ತಿ ಡಾ.ವೆಂಕಟೇಶ ಅಯ್ಯಾಂಗರ್ ರವರು ಉಪವಿಭಾಗಾಧಿಕಾರಿಯಾಗಿದ್ದ ಅವಧಿಯಲ್ಲಿ ಹೆಸರಿಸಿದ ನಾಡು ಮಧುಗಿರಿಯಾಗಿದೆ.

      ಮಧುಗಿರಿಯ ಮಧುವಿನ ಬೆಟ್ಟ ಇಂದು ಶೈಕ್ಷಣಿಕ ಜಿಲ್ಲಾ ಕೇಂದ್ರವಾಗಿರುವ ದಕ್ಷಿಣ ಭಾರತದಲ್ಲೆ ಐತಿಹಾಸಿಕ ಪ್ರಾಮುಖ್ಯತೆಯ ಪ್ರದೇಶವಾದ ಮಧುಗಿರಿಯು ಮೊದಲು ಚೋಳರ ಆಳ್ವಿಕೆಗೆ ಒಳಗಾಗಿ ಧನಂಜಯ ಹೀರಿಗನು ಕ್ರಿ.ಶ.1061ರಲ್ಲಿ ರಾಜೇಂದ್ರ ದೇವ ಚೋಳನು ಆಳ್ವಿಕೆ ನಡೆಸಿದ್ದು ನಂತರ ವಿಜಯನಗರದ ಕಾಲಾವಧಿಯ ಪಾಳೇಗಾರಿಕೆಯಲ್ಲಿ 13ನೇ ಶತಮಾನದ ಮಧ್ಯ ಭಾಗದಲ್ಲಿ ಕಂಡು ಬರುವ ನೊಳಂಬರ ವಂಶಾದಿಯಾಗಿ ಸಪ್ತ ನಾಡುಗಳನ್ನು ಕಟ್ಟಿದ್ದರು.

      ಇವರಲ್ಲಿ ಮಾರೇಗೌಡರು ಜಯಮಂಗಲಿ ನದಿ ತೀರದಲ್ಲಿ ಕ್ರಿ.ಶ.1399ರಲ್ಲಿ ಮುಮ್ಮಡಿ ಪಟ್ಟಣವನ್ನು ಕಟ್ಟಿ ಆಳ್ವಿಕೆ ಆರಂಭಿಸಿ ಸಂಸ್ಥಾಪಕನಾದ ಇತಿಹಾಸದಲ್ಲಿ ಬಿಜ್ಜಾವರದ ಪಾಳೇಗಾರರು ಅಥವಾ ಮಧುಗಿರಿಯ ಪಾಳೇಗಾರರು ಎಂದು ಗುರುತಿಸಲ್ಪಟ್ಟಿದ್ದಾರೆ. ಬಿಜ್ಜಾವರದ ಪಾಳೇಗಾರರಲ್ಲಿ ಹಿರೇಚಿಕ್ಕಪ್ಪಗೌಡ ಅಥವಾ ಕಾಳೇ ಚಿಕ್ಕಪ್ಪಗೌಡ ಮೊದಲು ಬೆಟ್ಟಕ್ಕೆ ಮಣ್ಣಿನ ಕೋಟೆಯನ್ನು ಕಟ್ಟಿದರೆ, ಇಮ್ಮಡಿ ಚಿಕ್ಕಪ್ಪಗೌಡ ಅಥವಾ ಇಮ್ಮಡಿ ಚಿಕ್ಕಭೂಪಾಲರು ಮಧುಗಿರಿಯ ರಾಜಧಾನಿಯನ್ನು ಬಿಜ್ಜಾವರದಿಂದ ಮಧುಗಿರಿಗೆ ಬದಲಾಯಿಸಿ ಬೆಟ್ಟದಲ್ಲಿ ಏಳು ಸುತ್ತಿನ ಕಲ್ಲಿನ ಕೋಟೆಯನ್ನು ಕ್ರಿ.ಶ.1801ರಲ್ಲಿ ಕಟ್ಟಿಸಿದರು.

      ಕ್ರಿ.ಶ.1678 ರಲ್ಲಿ ಮೈಸೂರಿನ ಅರಸ ದಳವಾಯಿ ದೇವರಾಜಯ್ಯ ವಶಪಡಿಸಿಕೊಂಡ ಮೇಲೆ ಕ್ರಿ.ಶ.1690ರಲ್ಲಿ ಚಿಕ್ಕದೇವರಾಜ ಒಡೆಯರ ಪತ್ನಿ ಗೌರಮ್ಮಣ್ಣಿ ಸಮೇತ ಮಧುಗಿರಿಗೆ ಆಗಮಿಸಿ ಅವರ ಪ್ರೋತ್ಸಾಹದಿಂದ ಬೃಂದಾವನ, ಉಯ್ಯಾಲೋತ್ಸವ ಕಂಬಗಳು, ಪುಷ್ಕರಣಿಗಳು ಬೆಟ್ಟದ ಸಮೀಪ ತಲೆ ಎತ್ತಿದವು. ಬೆಟ್ಟದ ಮೇಲೆ ಶ್ರೀ ಗೋಪಾಲಸ್ವಾಮಿ ದೇವಾಲಯ, ಆಂಜನೇಯನ ವಿಗ್ರಹ, ಅಂತರಾಳದ ಬಾಗಿಲು, ದಿಡ್ಡಿಬಾಗಿಲು, ಮೈಸೂರ್ ಗೇಟ್‍ಗಳು ಬೆಟ್ಟದಲ್ಲಿವೆ. ಬೃಹದಾಕಾರದ ಕೋಟೆ, ಕೊತ್ತಲಗಳು, ಕಂದಕ, ಕಿಲ್ಲೆ, ಸುರಂಗ ಬುರುಜು ಬತೇರಿಗಳು, ಝಂಡಾ ಬತೇರಿಗಳು, ಬೆಟ್ಟ ಏರುತ್ತಾ ಮೇಲೆ ಸಾಗಿದರೆ ಕಾಣುವವು ಸುಂದರವಾದ ದೋಣಿಗಳು ಚಂದ್ರದೋಣಿ, ನವಿಲುದೋಣಿ, ಪಂಚಮಹಾದೋಣಿಗಳು. ಜೊತೆಗೆ ಪುರಾತನ ಪಾಳುಬಿದ್ದ ಗರಡಿಮನೆ, ಶಿವಲಿಂಗಾಕಾರವಾಗಿ ಕಾಣುವ ಬೆಟ್ಟದ ಇಳಿಜಾರು ನೋಡಲು ತುಂಬಾ ರಮ್ಯ, ರುದ್ರ, ರಮಣೀಯ.

     ಎತ್ತರದಲ್ಲಿಹುದು ಅಂತರಾಳದ ದಿಡ್ಡಿಯ ಬಾಗಿಲು. ಅದರ ಸಮೀಪದಿ ಕಾಣುವುದು ಹಜಾರದ ಬಾಗಿಲು. ಮೇಲೆ ವಿಶಾಲವಾದ ವಠಾರ. ಪಾಳುಬಿದ್ದ ದೇವಾಲಯ, ಭತ್ತದ ಕಣಜ, ತುಪ್ಪದ ಕಣಜ ಹೀಗೆಯೆ ಪಾಳುಬಿದ್ದ ಕಣಜದ ಸಾಲು ಸಾಲು. ವಿಜಯನಗರದ ಆಡಳಿತಾವಧಿಯಲ್ಲಿ ದ್ರಾವಿಡ ಶೈಲಿಯಲ್ಲಿ ಶ್ರೀ ವೆಂಕಟರವಣ ಮತ್ತು ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯ ಹೃದಯ ಭಾಗದಲ್ಲಿ 2 ಎರಡು ಕಣ್ಣುಗಳಂತೆ ಗೋಚರಿಸುತ್ತವೆ. ವೀರ ಪಾಳೆಯಗಾರರು ರಾಜಾರೋಷದಿ ಕೋಟೆಕೊತ್ತಲಗಳನ್ನು ಕಟ್ಟಿ, ಪಾಳೆಯ ಪಟ್ಟುಗಳನ್ನು ಆಳಿ, ಕನ್ನಡ ನೆಲ, ಜಲ, ಭಾಷೆ ಧರ್ಮದ ಉಳಿವಿಗಾಗಿ ಪ್ರಾಣ ತೆತ್ತರು. ಕಾಲ ಉರುಳಿತು, ಕೋಟೆ ಪಾಳು ಬಿದ್ದಿತು, ಸೇರಿತು ಕಾಲಗರ್ಭದಲ್ಲಿ ಈ ಕೋಟೆಯ ಇತಿಹಾಸ.

      ಮಧುಗಿರಿ ಕ್ಷೇತ್ರವು ಮಳೆಯಾಧಾರಿತ ಬರಪೀಡಿತ ಪ್ರದೇಶವಾಗಿದ್ದು, ಪ್ರವಾಸೋದ್ಯಮ ಕೇಂದ್ರವಾದರೆ ಸ್ವಯಂ ಉದ್ಯೋಗ ತಾನಾಗಿಯೇ ಸೃಷ್ಟಿಯಾಗುತ್ತದೆಂಬ ಕಲ್ಪನೆಯಿಂದ, ಈ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಉದ್ದೇಶದಿಂದ ಶಾಸಕರಾಗಿದ್ದಾಗ ಕೆ.ಎನ್. ರಾಜಣ್ಣನವರು ಸ್ವತಃ ಚಾರಣ ಮಾಡಿದ ಮೊದಲ ಶಾಸಕರೆನಿಸಿಕೊಂಡು ಇತಿಹಾಸವೊಂದನ್ನು ಸೃಷ್ಟಿಸಿದರು. ನಂತರ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ವೇಳೆ 120 ಕೋಟಿ ರೂ. ಗಳನ್ನು ಬಜೆಟ್‍ನಲ್ಲಿ ಕೇಬಲ್ ಕಾರ್ ಎಂದು ನಮೂದಿಸಿ ಪ್ರಕಟಿಸಿದ್ದರು. ಕೆ.ಎನ್.ರಾಜಣ್ಣ ನುಡಿದಂತೆ ನಡೆಯುವವರು ಎಂಬುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ.

      ಮಧುಗಿರಿಯಲ್ಲಿ ನಡೆದ ಮರು ಚುನಾವಣೆ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಜನಾರ್ಧನ ರೆಡ್ಡಿ 10 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಕೇಂದ್ರಕ್ಕೆ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿ ಶಂಖು ಸ್ಥಾಪನೆ ನೆರವೇರಿಸಿದರು. ಆದರೆ ಅದು ಕಾರ್ಯಗತವಾಗಲಿಲ್ಲ. ಕೆ. ಎನ್ ರಾಜಣ್ಣನವರ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಕೇಂದ್ರ ಪ್ರವಾಸೋದ್ಯಮ ಸಚಿವ ನಟ ಚಿರಂಜೀವಿರವರೆಗೆ ಪ್ರವಾಸೋದ್ಯಮ ಕೇಂದ್ರ ಮಾಡುವಂತೆ ಮನವಿ ಸಲ್ಲಿಸಿದರು.

       ಕೆ.ಎನ್.ರಾಜಣ್ಣನವರ ಶಾಸಕರಾಗಿದ್ದ ಅವಧಿಯಲ್ಲಿ ಕಂದಾಯ ಇಲಾಖೆಯಿಂದ ಕೇಬಲ್ ಕಾರ್ ಅಳವಡಿಕೆಗೆ ಬೇಕಾಗುವಷ್ಟು 10 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ, ಬಾಂಬೆಯ ಕಂಪನಿಯೊಂದರ ಜೊತೆಯಾಗಿ, ಕೇಬಲ್ ಕಾರ್ ಅಳವಡಿಕೆಗಾಗಿ ಸ್ಥಳೀಯ ಆಧಿಕಾರಿಗಳ ನೆರವಿನಿಂದ ನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೇಂದ್ರ ಪುರಾತತ್ವ ಇಲಾಖೆಯವರು ಕೇಬಲ್ ಕಾರ್ ಅಳವಡಿಕೆಗೆ ಸಾಕಷ್ಟು ತಾಂತ್ರಿಕ ಕಾರಣಗಳು ಹಾಗೂ ಅಡ್ಡಿ-ಆತಂಕಗಳಿವೆ ಎಂದೇಳಿ ಈ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಯಿತು.

      ಹಾಲಿ ಶಾಸಕ ಎಂ.ವಿ. ವೀರಭದ್ರಯ್ಯನವರು ಮೂಲೆ ಸೇರಿದ್ದ ಮಧುಗಿರಿ ಪ್ರವಾಸೋದ್ಯಮ ಕಡತವನ್ನು ಬೆಂಬಿಡದೆ ಹುಡುಕಿಸಿ, ಮತ್ತೆ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕ ಮಾಡಿದ್ದರ ಫಲ ಅಧಿಕೃತವಾಗಿ ಎಪ್ರಿಲ್-21 ರಂದು ಕರ್ನಾಟಕ ಪ್ರವಾಸಿ ತಾಣಗಳನ್ನು ಆಕರ್ಷಿಸಲು ಇಲಾಖೆ ವತಿಯಿಂದ ಪ್ರವಾಸಿ ತಾಣಗಳಲ್ಲಿ ರೋಪ್ ವೇ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅವರಿಗೆ ಪತ್ರದ ಮೂಲಕ ಕೋರಿದ್ದಾರೆ.

     ಅಡಕೆ, ತೆಂಗು, ದಾಳಿಂಬೆ, ಕನಕಾಂಬರ, ಮಳ್ಳೆ, ಕಾಕಡ, ಮಲ್ಲಿಗೆ ಕೈತೋಟಗಳ, ಜೇನಿನ ಬೀಡಾಗಿ, ಶೇಂಗಾ ನಾಡಾಗಿದೆ. ಸುವರ್ಣಮುಖಿ, ಜಯಮಂಗಲಿ ನದಿಗಳನ್ನು ಹೊಂದಿರುವ ಶೈವ, ವೈಷ್ಣವ, ಜೈನ, ಇಸ್ಲಾಂ, ಇತ್ತೀಚೆಗೆ ಕ್ರಿಶ್ಚಿಯನ್ ಧರ್ಮಗಳ ಸೌಹಾರ್ದತೆಯ ಬೀಡಾಗಿದೆ. ಜನತೆಯ ಧರ್ಮಾತೀತವಾದ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಧುಗಿರಿಯು ಮೆರೆಯುತ್ತಿದೆ. ಜನರ ಬಹು ದಶಕಗಳ ಬೇಡಿಕೆಯಾಗಿರುವ ಜಿಲ್ಲಾ ಕೇಂದ್ರ, ಶಾಶ್ವತ ನೀರಾವರಿ ಯೋಜನೆಗಳ ಜೊತೆಗೆ ಮತ್ತಷ್ಟು ಐತಿಹಾಸಿಕ ಸ್ಮಾರಕ, ಅರಣ್ಯಗಳ ಸಂರಕ್ಷಣೆಗೆ ಎಲ್ಲ್ಲರೂ ಕೈ ಜೋಡಿಸಿ ಮvಷ್ಟು ಸಮಗ್ರ ಅಭಿವೃದ್ಧಿಯನ್ನು ಮಧುಗಿರಿ ತಾಲ್ಲೂಕು ಕಾಣಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap