ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಬಟವಾಡಿ ಜಂಕ್ಷನ್‌ನಿಂದ ಬಿಜಿಎಸ್ ಸರ್ಕಲ್‌ವರೆಗೆ ವಾಹನ ಸಂಚಾರ ನಿರ್ಬಂಧ
ತುಮಕೂರು
ಬಿಜೆಪಿ ಪರವಾಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಇಂದು ಪ್ರಧಾನಿ ಮೋದಿ ಅವರು ತುಮಕೂರು ನಗರಕ್ಕೆ ಆಗಮಿಸುತ್ತಿದ್ದು, ಬಿಗಿ ಪೊಲೀಸ್ ಭದ್ರತೆಯೊಂದಿಗೆ ನಗರದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಶುಕ್ರವಾರ ಸಂಜೆ 4.20ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‌ಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕರ ಜೊತೆಗೆ ವಿಶೇಷವಾಗಿ ನಿವೃತ್ತ ಪೌರ ಕಾರ್ಮಿಕ ಗಂಗರಾಮಯ್ಯ, ಚಮ್ಮಾರ ವೃತ್ತಿಯ ಮಹಾದೇವ, ವಿವಿಧ ಬಗೆಯ ಟೀ ತಯಾರಿಯಿಂದ ಹೆಸರು ಪಡೆದಿರುವ ಶೆಟ್ಟಾಳಿ, ಬಾಯರ್ಸ್ ಕಾಫಿ ಕೃಷ್ಣಮೂರ್ತಿ ಅವರು ವಿಶೇಷವಾಗಿ ಪ್ರಧಾನಿ ಮೋದಿಯವರಿಗೆ ಹೂ ನೀಡಿ ಸ್ವಾಗತಿಸಲಿದ್ದಾರೆ.
ಬಳಿಕ ಬಿ.ಎಚ್.ರಸ್ತೆ ಮಾರ್ಗವಾಗಿ ಬಿಜೆಪಿ ಪ್ರಚಾರ ಸಮಾವೇಶ ನಡೆಯುವ ಸ್ಥಳವಾದ ಸರ್ಕಾರಿ ಹೈಸ್ಕೂಲ್ ಮೈದಾನಕ್ಕೆ ಪ್ರಧಾನಿಯವರು ಆಗಮಿಸಲಿದ್ದು, ನಗರ –ಗ್ರಾಮಾಂತರ ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು. ಪ್ರಧಾನಿಯವರ ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ತುಮಕೂರು ಜಿಲ್ಲೆಯ ಸಂಕೇತವಾಗಿ ಕೊಬ್ಬರಿ ಹಾರವನ್ನು ಹಾಕುವ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಅಗತ್ಯ ತಯಾರಿ ಮಾಡಿಕೊಂಡಿದೆ.
ಸಾರ್ವಜನಿಕರು ಎರಡು ತಾಸು ಮುಂಚೆ ಸಮಾವೇಶ ಸ್ಥಳಕ್ಕೆ ಆಗಮಿಸಬೇಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ ಅವರು ಕೋರಿದ್ದು, ಯಾವುದೇ ಪ್ಲಾಸ್ಟಿಕ್ ಬಾಟಲ್, ಬ್ಯಾಗ್, ಪೇಪರ್‌ಗಳನ್ನು ತರುವಂತಿಲ್ಲ.
ವಾಹನ ಸಂಚಾರಗಳಲ್ಲಿ ಬದಲಾವಣೆ: ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ವಾಹನಗಳ ಸಂಚಾರ ಮಾರ್ಪಡಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಆದೇಶಿಸಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತುಮಕೂರು ನಗರದ ಬಟವಾಡಿ ಜಂಕ್ಷನ್‌ನಿAದ ಬಿಜಿಎಸ್ ಸರ್ಕಲ್‌ವರೆಗೆ ಸಾರ್ವಜನಿಕ ವಾಹನ ಸಂಚಾರವನ್ನು ನಿರ್ಬಂಧಿಸಿ ಹಾಗೂ ತುಮಕೂರು ನಗರದಲ್ಲಿ ರಸ್ತೆ ಮಾರ್ಗಗಳ ಬದಲಾವಣೆ ಮಾಡಲಾಗಿರುತ್ತದೆ.
ಬೆಂಗಳೂರು ಕಡೆಯಿಂದ ಬರುವವರಿಗೆ:
ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶ ಮಾಡುವ ಸಾರ್ವಜನಿಕರ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಟವಾಡಿ, ಹನುಮಂತಪುರ, ಸತ್ಯಮಂಗಲ, ಅಂತರಸನಹಳ್ಳಿಗೆ ಬಂದು ಸರ್ವೀಸ್ ರಸ್ತೆಯ ಮೂಲಕ ಕನಕವೃತ್ತ(ಶಿರಾಗೇಟ್) ಮೂಲಕ ತುಮಕೂರು ನಗರವನ್ನು ಪ್ರವೇಶಿಸುವುದು.
ಶಿರಾ ಕಡೆಯಿಂದ ಬರುವವರಿಗೆ:
ಶಿರಾ ಕಡೆಯಿಂದ ತುಮಕೂರು ನಗರ ಪ್ರವೇಶ ಮಾಡುವ ಸಂಚಾರ ವಾಹನಗಳು ಲಿಂಗಾಪುರದ ಹತ್ತಿರ ಸರ್ವೀಸ್ ರಸ್ತೆಗೆ ಇಳಿದು ಹಳೇ ಶಿರಾ ರಸ್ತೆ ಮೂಲಕ ಶ್ರೀದೇವಿ ಮೆಡಿಕಲ್ ಕಾಲೇಜು ಮುಂದಿನ ರಸ್ತೆಯಿಂದ ಕನಕವೃತ್ತ(ಶಿರಾಗೇಟ್) ಮೂಲಕ ತುಮಕೂರು ನಗರವನ್ನು ಪ್ರವೇಶಿಸುವುದು.
ಕುಣಿಗಲ್ ಕಡೆಯಿಂದ ಬರುವವರಿಗೆ:
ಕುಣಿಗಲ್ ಕಡೆಯಿಂದ ತುಮಕೂರು ನಗರ ಪ್ರವೇಶ ಮಾಡುವ ಸಂಚಾರ ವಾಹನಗಳು ರಿಂಗ್ ರಸ್ತೆಯ ಕುಣಿಗಲ್ ಸರ್ಕಲ್ ಮುಖಾಂತರ ಲಕ್ಕಪ್ಪ ಸರ್ಕಲ್‌ಗೆ ಬಂದು ತುಮಕೂರು ನಗರವನ್ನು ಪ್ರವೇಶಿಸುವುದು.
ತಿಪಟೂರು ಕಡೆಯಿಂದ ಬರುವವರಿಗೆ:
ತಿಪಟೂರು ಕಡೆಯಿಂದ ತುಮಕೂರಿಗೆ ಬಂದು ಬೆಂಗಳೂರು ಕಡೆ ಹೋಗುವ ವಾಹನಗಳು ಲಕ್ಕಪ್ಪ ಸರ್ಕಲ್‌ನಿಂದ ಕುಣಿಗಲ್ ರಸ್ತೆ ಅಥವಾ ಗುಬ್ಬಿಗೇಟ್ ರಿಂಗ್ ರಸ್ತೆಯ ಮೂಲಕ ಕುಣಿಗಲ್ ಜಂಕ್ಷನ್‌ಗೆ ಬಂದು ರಿಂಗ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಬೆಂಗಳೂರಿಗೆ ಸಂಚರಿಸುವುದು.
ತಿಪಟೂರು ಕಡೆಯಿಂದ ಕುಣಿಗಲ್ ಕಡೆಗೆ
ಹೋಗುವವರು ರಿಂಗ್ ರೋಡ್ ಗುಬ್ಬಿಗೇಟ್ ಮುಖಾಂತರ ಕುಣಿಗಲ್ ಜಂಕ್ಷನ್ ಮುಖಾಂತರ ಹಾದು ಕುಣಿಗಲ್ ಕಡೆಗೆ ಸಂಚರಿಸುವುದು.
ಶಿರಾ, ಕುಣಿಗಲ್‌ಗೆ ತೆರಳಲು ಪರ‍್ಯಾಯಮಾರ್ಗ:
ತಿಪಟೂರು ಕಡೆಯಿಂದ ಶಿರಾ ಕಡೆಗೆ ಹೋಗುವವರು ರಿಂಗ್ ರೋಡ್ ಮುಖಾಂತರ ಕುಣಿಗಲ್ ಜಂಕ್ಷನ್‌ನಿಂದ ರಿಂಗ್ ರಸ್ತೆಯಲ್ಲೇ ಮುಂದುವರೆದು ಕ್ಯಾತ್ಸಂದ್ರ ಮುಖಾಂತರ ಹಾದು ಹೆದ್ದಾರಿ-48ರ ಮೇಲಿಂದ ಹಾಯ್ದು ಶಿರಾ ಕಡೆಗೆ ಸಂಚರಿಸುವುದು.
ಬೆಂಗಳೂರು ಕಡೆಯಿಂದ ಕುಣಿಗಲ್ ಕಡೆಗೆ
ಹೋಗುವವರು ಕ್ಯಾತ್ಸಂದ್ರದ ರಿಂಗ್ ರೋಡ್ ಮೂಲಕ ಕುಣಿಗಲ್ ಜಂಕ್ಷನ್ ಬಂದು ಕುಣಿಗಲ್ ಕಡೆಗೆ ಸಂಚರಿಸುವುದು.
ಸಂಚಾರಿ ಮಾರ್ಗ ಆದೇಶವನ್ನು ವಾಹನ ಸವಾರರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ವಹಿಸಲಾಗುವುದು.
-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ.
