ಕಾಬೂಲ್:
2021ರ ಆಗಸ್ಟ್‌ನಲ್ಲಿ ಹಿಂಸಾಚಾರದ ಮೂಲಕವೇ ಅಫ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿರುವ ತಾಲಿಬಾನ್, ಇದೀಗ ರಷ್ಯಾ ಮತ್ತು ಉಕ್ರೇನ್‌ಗೆ ‘ಸಂಯಮ’ದಿಂದ ಇರುವಂತೆ ಮತ್ತು ಶಾಂತಿಯುತ ಮಾತುಕತೆ ಮೂಲಕ ಬಿಕ್ಕಟ್ಟನ್ನು ಶಮನಗೊಳಿಸುವಂತೆ ಸಲಹೆ ನೀಡಿದೆ.
‘ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನವು ಉಕ್ರೇನ್‌ನಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಾಗರಿಕರ ಸಾವುನೋವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ.
ಎರಡು ಬಣದವರು (ದೇಶದವರು) ಸಂಯಮ ತೋರುವಂತೆ ಅಫ್ಗಾನಿಸ್ತಾನ ಕರೆ ನೀಡುತ್ತದೆ. ಹಿಂಸಾಚಾರವನ್ನು ತೀವ್ರಗೊಳಿಸುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಹಾಗೆಯೇ, ‘ಅಫ್ಗಾನಿಸ್ತಾನವು, ತನ್ನ ತಟಸ್ಥ ವಿದೇಶಾಂಗ ನೀತಿಗೆ ಅನುಗುಣವಾಗಿ ಮಾತುಕತೆ ಮತ್ತು ಶಾಂತಿಯುತ ವಿಧಾನಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವಂತೆ ಎರಡೂ ದೇಶಗಳಿಗೆ ಕರೆ ನೀಡುತ್ತದೆ.
ಸಂಘರ್ಷದಲ್ಲಿ ಭಾಗಿಯಾಗಿರುವ ಎರಡೂ ಪಕ್ಷದವರು (ದೇಶದವರು), ಅಫ್ಗಾನಿಸ್ತಾನದ ವಿದ್ಯಾರ್ಥಿಗಳು ಮತ್ತು ನಾಗರಿಕರ ಜೀವಗಳನ್ನು ರಕ್ಷಿಸುವುದರತ್ತ ಗಮನಹರಿಸಬೇಕು’ ಎಂದೂ ಒತ್ತಾಯಿಸಿದೆ.
20 ವರ್ಷಗಳಿಂದ ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಮ್ಮ ಸೇನಾ ಪಡೆಗಳನ್ನು ಅಮೆರಿಕ ಮತ್ತು ನ್ಯಾಟೊ 2021ರಲ್ಲಿ ವಾಪಸ್ ಕರೆಸಿಕೊಂಡವು. ಅದಾದ ಬಳಿಕ, ಸದ್ಯ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವಂತೆಯೇ ಅಫ್ಗಾನಿಸ್ತಾನದಲ್ಲಿ ಆಕ್ರಮಣ ನಡೆಸಿದ್ದ ತಾಲಿಬಾನ್, 2021ರ ಆಗಸ್ಟ್ 21ರಂದು ಅಲ್ಲಿನ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ವರದಿಗಳ ಪ್ರಕಾರ, ತಾಲಿಬಾನ್ ದಾಳಿ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ನಾಗರಿಕರು ಮೃತಪಟ್ಟು, 2 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
