ಬೆಂಗಳೂರು:
ಇಂದು ಮುಂಜಾನೆ ಮೃತರಾದ ಕರ್ನಾಟಕದ ಹಿರಿಯ ರಾಜಕೀಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಗೌರವಾರ್ಥ ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಹಾಗೂ ನಾಳೆ (ಬುಧವಾರ) ರಜೆ ಘೋಷಣೆ ಮಾಡಿದೆ.
ಬುಧವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ನಾಳೆ ಶಾಲೆ- ಕಾಲೇಜು- ಸರ್ಕಾರಿ ಕಚೇರಿಗಳು ಕಾರ್ಯಾಚರಿಸುವುದಿಲ್ಲ. ಡಿಸೆಂಬರ್ 10ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಶೋಕಾಚರಣೆ ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಸ್ಎಂ ಕೃಷ್ಣ ವಿಧಿವಶರಾದ ಬೆನ್ನಲ್ಲೇ ಹುಟ್ಟೂರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದೆ. ನಾಳೆ ಬೆಳಗ್ಗೆ 8ಗಂಟೆ ವರೆಗೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಎಸ್ಎಂ ಕೃಷ್ಣ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಬಳಿಕ 10 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆ ವರೆಗೂ ಎಸ್ಎಂ ಕೃಷ್ಣ ಹುಟ್ಟೂರು ಮದ್ದೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ 11ರ ಮಧ್ಯಾಹ್ನ 3 ಗಂಟೆ ನಂತರ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದ ಎಸ್ಎಂ ಕೃಷ್ಣ ದಕ್ಷ ಆಡಳಿತ ನೀಡಿದ್ದಾರೆ. ಮಗಳು ಹಾಗೂ ಧರ್ಮ ಪತ್ನಿ ಫೋನ್ ಮಾಡಿ ನೀಡಿದ ತಕ್ಷಣವೇ ಬೆಂಗಳೂರಿಗೆ ಹೊರಟು ಬಂದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಧಿವೇಶನ ಸಂಬಂಧ ಬೆಳಗಾವಿಯಲ್ಲಿದ್ದ ಡಿಕೆ ಶಿವಕುಮಾರ್ ಬೆಂಗಳೂರಿಗೆ ಆಗಮಿಸಿ ಎಂಎಸ್ ಕೃಷ್ಣ ಅಂತಿಮ ದರ್ಶನ ಪಡೆದಿದ್ದಾರೆ.
ಎಸ್ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ಎಸ್ಎಂ ಕೃಷ್ಣಗೆ ಇಷ್ಟವಾದ ಜಾಗದಲ್ಲಿಯೇ, ಅಂದರೆ ಕಾಫಿಡೇ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ಎಂ ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಡಾ. ಸತ್ಯನಾರಾಯಣ ಮೈಸೂರು, ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಕೃಷ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.