ಲಖನೌ:
ಉತ್ತರ ಪ್ರದೇಶದ ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಇಂದು ನಸುಕಿನ ವೇಳೆಯಲ್ಲಿ ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿವೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ. ಅಪಘಾತ ಕುರಿತು ಮಾಹಿತಿ ನೀಡಿರುವ ನಾರ್ತ್ ಸೆಂಟ್ರಲ್ ರೈಲ್ವೇ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ್ ತ್ರಿಪಾಠಿ,ಮುಂಜಾನೆ 2.30 ಕ್ಕೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದರು.
ವಾರಣಾಸಿಯಿಂದ ಅಹಮದಾಬಾದ್ ಕಡೆಗೆ ತೆರಳುತ್ತಿದ್ದ ರೈಲು ಕಾನ್ಪುರ ಮತ್ತು ಭೀಮಸೇನ್ ರೈಲು ನಿಲ್ದಾಣದ ನಡುವೆ ರೈಲು ಹಳಿತಪ್ಪಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಕೆಲವು ಬಂಡೆಗಳು ಇಂಜಿನ್ ನ ಮುಂಭಾಗಕ್ಕೆ ಬಿದಿದ್ದು, ಸ್ವಲ್ಪ ಹಾನಿಯಾಗಿರುವುದಾಗಿ ಲೊಕೊ ಪೈಲಟ್ ಹೇಳಿದ್ದಾರೆ. ದೊಡ್ಡ ಶಬ್ದದ ನಂತರ ರೈಲು ನಿಂತಾಗ ಪ್ರಯಾಣಿಕರು ಮಲಗಿದ್ದರು ಎಂದು ರೈಲ್ವೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲು ಕಾನ್ಪುರ ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ, ನಮಗೆ ದೊಡ್ಡ ಶಬ್ದ ಕೇಳಿಸಿತು. ಕೋಚ್ ಅಲುಗಾಡಲು ಪ್ರಾರಂಭಿಸಿತು. ನಾನು ತುಂಬಾ ಭಯಪಟ್ಟೆ ಆದರೆ ರೈಲು ನಿಂತಿತು ಎಂದು ಪ್ರಯಾಣಿಕರಲ್ಲಿ ಒಬ್ಬರಾದ ವಿಕಾಸ್ ಪಿಟಿಐ ವಿಡಿಯೋಗೆ ತಿಳಿಸಿದ್ದಾರೆ.
‘ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯೊಂದಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸ್ಥಳದಿಂದ ಸ್ಥಳಾಂತರಿಸಲಾಗಿದೆ ಎಂದು ಉತ್ತರ ಪ್ರದೇಶ ಪರಿಹಾರ ಆಯುಕ್ತ ಜಿ.ಎಸ್.ನವೀನ್ ಕುಮಾರ್ ಹೇಳಿದ್ದಾರೆ.
ರೈಲು ಹಳಿ ತಪ್ಪಿದ ಕಾರಣ ಏಳು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಮೂರು ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಪಘಾತದ ಸ್ಥಳದಿಂದ ಕಾನ್ಪುರ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಸಾಗಿಸಲು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.